ಇರಾನ್ ವಿದೇಶಾಂಗ ಸಚಿವರ ವಿರುದ್ಧ ನಿವೃತ್ತ ಮೇಜರ್ ಆರ್ಯರ ನಿಂದಾತ್ಮಕ ಹೇಳಿಕೆಯಿಂದ ರಾಜತಾಂತ್ರಿಕ ವಿವಾದ ಸೃಷ್ಟಿ

PC : thenewsminute.com
ಹೊಸದಿಲ್ಲಿ: ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಹಾಗೂ ಟೆಲಿವಿಜನ್ ಕಮೆಂಟೇಟರ್ ಮೇಜರ್ ಗೌರವ ಆರ್ಯ ಅವರು ಯೂಟ್ಯೂಬ್ ಪ್ರಸಾರದಲ್ಲಿ ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರನ್ನು ‘ಸನ್ ಆಫ್ ಪಿಗ್(ಹಂದಿಯ ಮಗ)’ ಎಂದು ಕರೆದ ಬಳಿಕ ಭಾರತ ಮತ್ತು ಇರಾನ್ ನಡುವೆ ರಾಜತಾಂತ್ರಿಕ ವಿವಾದ ಭುಗಿಲೆದ್ದಿದೆ. ಈ ನಿಂದನೆ ಇಸ್ಲಾಮೋಫೋಬಿಕ್ ಅರ್ಥಗಳನ್ನು ಹೊಂದಿರುವುದರಿಂದ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ರಕ್ಷಣಾ ತಜ್ಞರಾಗಿ ಭಾರತೀಯ ಟಿವಿ ವಾಹಿನಿಗಳಲ್ಲಿಯ ಚರ್ಚೆಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ಆರ್ಯ ‘ಆಪರೇಷನ್ ಸಿಂಧೂರ’ ನಡೆಯುತ್ತಿದ್ದಾಗ ಮೇ 8ರಂದು ತನ್ನ ‘ಚಾಣಕ್ಯ ಡಯಲಾಗ್ಸ್’ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಿದ ತನ್ನ ವೀಡಿಯೊದಲ್ಲಿ ಈ ನಿಂದಾತ್ಮಕ ಹೇಳಿಕೆಯನ್ನು ನೀಡಿದ್ದರು.
‘ಭಾರತೀಯ ಸೇನೆಯು ತಿರುಗೇಟು ನೀಡುತ್ತಿದೆ, ಪಾಕಿಸ್ತಾನವು ಹೊತ್ತಿ ಉರಿಯುತ್ತಿದೆ’ ಎಂಬ ಶೀರ್ಷಿಕೆಯ ವೀಡಿಯೊದಲ್ಲಿ ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆಯಲ್ಲಿ ಇರಾನಿನ ಹಸ್ತಕ್ಷೇಪವನ್ನು ವಿವರಿಸುತ್ತಿದ್ದ ಸಂದರ್ಭದಲ್ಲಿ ಆರ್ಯ ಇರಾನ್ ನ ವಿದೇಶಾಂಗ ಸಚಿವರ ವಿರುದ್ಧ ಕಟುವಾದ ವೈಯಕ್ತಿಕ ದಾಳಿಯನ್ನು ನಡೆಸಿದ್ದರು.
ಭಾರತ-ಪಾಕಿಸ್ತಾನ ವ್ಯವಹಾರಗಳ ನಡುವೆ ಮೂಗು ತೂರಿಸಿದ್ದಕ್ಕಾಗಿ ಇರಾನನ್ನು ತರಾಟೆಗೆತ್ತಿಕೊಂಡಿದ್ದ ಆರ್ಯ, ಪರದೆಯ ಮೇಲೆ ಅರಘ್ಚಿಯವರ ಮುಖವನ್ನು ಹೈಲೈಟ್ ಮಾಡಿ ಅದರ ಮೇಲೆ ‘ಪಿಗ್’ ಎಂದು ಬರೆದಿದ್ದರು ಮತ್ತು ಅವರು ಭಾರತದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಯಾವುದೇ ರಾಜತಾಂತ್ರಿಕ ಮಾತುಕತೆಗಳು ಪಹಲ್ಗಾಮ್ ದಾಳಿಯ ಬೆನ್ನಿಗೇ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರೊಂದಿಗೆ ನಡೆಯಬೇಕಿತ್ತು,ಭಾರತದ ಮಿಲಿಟರಿ ಪ್ರತ್ಯುತ್ತರದ ಸಮಯದಲ್ಲಿ ಅಲ್ಲ ಎಂದೂ ಅವರು ವಾದಿಸಿದ್ದರು.
ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಸೃಷ್ಟಿಯಾದ ನಂತರ ಮೇ 8ರಂದು ಅರಘ್ಚಿ ಭಾರತ ಮತ್ತು ಪಾಕಿಸ್ತಾನಗಳ ಜೊತೆ ಮಾತುಕತೆಗಳನ್ನು ನಡೆಸಿದ್ದರು.
ಇರಾನ್ ಪಾಕಿಸ್ತಾನದೊಂದಿಗೆ ನಡೆಸಿದ್ದ ಮಾತುಕತೆಯ ಹಿಂದೆ ಧಾರ್ಮಿಕ ಪ್ರೇರಣೆಗಳಿವೆ ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದ ಆರ್ಯ, ಅವರೆಡೂ ಮುಸ್ಲಿಮ್ ದೇಶಗಳಾಗಿದ್ದರಿಂದ ಇರಾನ್ ಮಧ್ಯಪ್ರವೇಶಿಸಿದೆ ಎಂದು ಹೇಳಿದ್ದರು. ‘ಟೆಹರಾನ್ನಲ್ಲಿ ಯಹೂದಿಗಳು ಮತ್ತು ಅಮೆರಿಕನ್ನರು ನಿಮ್ಮ ಮೇಲೆ ಜಂಟಿ ದಾಳಿ ನಡೆಸಿದಾಗ ನಮ್ಮೊಂದಿಗೆ ಹೇಳಿಕೊಳ್ಳಲು ಬರಬೇಡಿ’ ಎಂಬ ಪ್ರಚೋದನಾಕಾರಿ ಎಚ್ಚರಿಕೆಯನ್ನೂ ಆರ್ಯ ಅಂತ್ಯದಲ್ಲಿ ನೀಡಿದ್ದರು.
ಆರ್ಯ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ದಿಲ್ಲಿಯ ಇರಾನ್ ರಾಯಭಾರ ಕಚೇರಿಯು, ‘ಅತಿಥಿಗಳನ್ನು ಗೌರವಿಸುವುದು ಇರಾನ್ ಸಂಸ್ಕೃತಿಯಲ್ಲಿ ದೀರ್ಘಕಾಲದ ಸಂಪ್ರದಾಯವಾಗಿದೆ. ನಾವು ಇರಾನಿಯನ್ನರು ಅತಿಥಿಗಳನ್ನು ‘ದೇವರ ಪ್ರೀತಿಪಾತ್ರರು’ ಎಂದು ಪರಿಗಣಿಸುತ್ತೇವೆ. ನಿಮ್ಮ ಬಗ್ಗೆ ಏನು?’ ಎಂದು ಪ್ರಶ್ನಿಸಿದೆ.
ರಾಜತಾಂತ್ರಿಕ ವಿವಾದದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡ ಭಾರತ ಸರಕಾರವು ತಕ್ಷಣ ಎಚ್ಚೆತ್ತುಕೊಂಡು ಆರ್ಯರ ಹೇಳಿಕೆಗಳಿಂದ ಅಂತರವನ್ನು ಕಾಯ್ದುಕೊಂಡಿದೆ.
ಟೆಹರಾನ್ನಲ್ಲಿಯ ಭಾರತೀಯ ರಾಯಭಾರ ಕಚೇರಿಯು ಹೇಳಿಕೆಯೊಂದನ್ನು ಹೊರಡಿಸಿ ಆರ್ಯ ಓರ್ವ ಖಾಸಗಿ ವ್ಯಕ್ತಿಯಾಗಿದ್ದಾರೆ ಮತ್ತು ಅವರ ಅಭಿಪ್ರಾಯಗಳು ಭಾರತದ ಅಧಿಕೃತ ನಿಲುವನ್ನು ಪ್ರತಿನಿಧಿಸುವುದಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದೆ. ವೀಡಿಯೊದಲ್ಲಿ ಬಳಸಿರುವ ಅಗೌರವದ ಭಾಷೆಯು ಸೂಕ್ತವಲ್ಲ ಎನ್ನುವುದು ಭಾರತ ಸರಕಾರದ ನಿಲುವಾಗಿದೆ ಎಂದು ಅದು ಹೇಳಿದೆ.
ಆದಾಗ್ಯೂ ತೀವ್ರ ಪ್ರತಿಕ್ರಿಯೆಗಳ ನಡವೆಯೂ ಆರ್ಯ ತನ್ನ ನಿಲುವಿಗೆ ಅಂಟಿಕೊಂಡಿದ್ದು,ತನ್ನ ಟೀಕೆಗಳನ್ನು ದ್ವಿಗುಣಗೊಳಿಸಿದ್ದಾರೆ.
ತಾನು ಸತ್ಯವನ್ನು ಹೇಳಿದ್ದೇನೆ ಎಂದಿರುವ ಅವರು, ಸರಕಾರವು ತನ್ನ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.
‘ನಾನು ನೇರವಾಗಿ ಸತ್ಯವನ್ನು ಹೇಳಿದ್ದಕ್ಕಾಗಿ ನನ್ನ ಸರಕಾರವು ನನ್ನ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಲು ನಾನು ಪಾಕಿಸ್ತಾನಿಯಲ್ಲ. ಇರಾನಿನ ವಿದೇಶಾಂಗ ಸಚಿವರಿಗೆ ಯಾವುದೇ ಸಮಸ್ಯೆಯಿದ್ದರೆ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ಜೊತೆ ಚರ್ಚಿಸಬಹುದು’ ಎಂದು ಆರ್ಯ ಹೇಳಿದರು.







