ತಕ್ಷಣ ಅಮೆರಿಕಕ್ಕೆ ಹಿಂತಿರುಗಿ: ಎಚ್-1ಬಿ ವೀಸಾಗೆ ಟ್ರಂಪ್ 1 ಲಕ್ಷ ಡಾಲರ್ ಶುಲ್ಕ ಘೋಷಿಸಿದ ಬೆನ್ನಲ್ಲೆ ಕಂಪೆನಿಗಳಿಂದ ಉದ್ಯೋಗಿಗಳಿಗೆ ಸೂಚನೆ

ಸಾಂದರ್ಭಿಕ ಚಿತ್ರ (credit: Grok)
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್-1ಬಿ ವೀಸಾಗೆ ಒಂದು ಲಕ್ಷ ಡಾಲರ್( 90 ಲಕ್ಷ ರೂಪಾಯಿ) ಶುಲ್ಕವನ್ನು ಘೋಷಿಸಿದ ಬೆನ್ನಲ್ಲೆ ವಲಸಿಗರನ್ನು ಪ್ರತಿನಿಧಿಸುವ ವಕೀಲರು ಮತ್ತು ಕಂಪೆನಿಗಳು H-1B ವೀಸಾ ಹೊಂದಿರುವವರು ಸಧ್ಯ ಅಮೆರಿಕದ ಹೊರಗೆ ಪ್ರಯಾಣಿಸದಂತೆ ಎಚ್ಚರಿಕೆ ನೀಡಿವೆ. ಇದಲ್ಲದೆ ಅಮೆರಿಕದಿಂದ ಹೊರಗಿದ್ದರೆ ತಕ್ಷಣ ಹಿಂತಿರುಗುವಂತೆ ಉದ್ಯೋಗಿಗಳಿಗೆ ಸೂಚಿಸಿದೆ.
ಎಚ್-1ಬಿ ವೀಸಾಗೆ ಒಂದು ಲಕ್ಷ ಡಾಲರ್ ಶುಲ್ಕವನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಶುಕ್ರವಾರ ಘೋಷಿಸಿದ್ದಾರೆ. ಈ ಘೋಷಣೆ ಸೆಪ್ಟೆಂಬರ್ 21ರಿಂದ ಜಾರಿಗೆ ಬರಲಿದೆ. ಅಮೆರಿಕಾದಲ್ಲಿ ಕೆಲಸ ಮಾಡುತ್ತಿರುವ ಹಲವಾರು ಭಾರತೀಯರ ಮೇಲೆ ಇದು ಪರಿಣಾಮ ಬೀರಲಿದೆ. ತಕ್ಷಣ ಅಮೆರಿಕಕ್ಕೆ ಮರಳುವಂತೆ ಕೆಲ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಸೂಚಿಸಿದೆ.
ವಲಸಿಗರನ್ನು ಪ್ರತಿನಿಧಿಸುವ ವಕೀಲರು ಮತ್ತು ಕಂಪೆನಿಗಳು H-1B ವೀಸಾ ಹೊಂದಿರುವವರು ಅಥವಾ ಅವರ ಕುಟುಂಬದ ಸದಸ್ಯರು ಪ್ರಸ್ತುತ ಕೆಲಸ ಅಥವಾ ರಜೆಗಾಗಿ ಅಮೆರಿಕದ ಹೊರಗೆ ಇದ್ದರೆ ಸೆಪ್ಟೆಂಬರ್ 21ರಂದು ಆದೇಶ ಅನ್ವಯವಾಗುವ ಮೊದಲು ಅಮೆರಿಕಕ್ಕೆ ಮರಳುವಂತೆ ಕೇಳಿಕೊಂಡಿದೆ.
“ವ್ಯಾಪಾರ ಅಥವಾ ರಜೆಯ ಮೇಲೆ ಅಮೆರಿಕದಿಂದ ಹೊರಗಿರುವ H-1B ವೀಸಾ ಹೊಂದಿರುವವರು ಸೆಪ್ಟೆಂಬರ್ 21ರ ಮಧ್ಯರಾತ್ರಿಯ ಮೊದಲು ದೇಶಕ್ಕೆ ಬರದಿದ್ದರೆ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ” ಎಂದು ಖ್ಯಾತ ವಲಸೆ ವಕೀಲ ಸೈರಸ್ ಮೆಹ್ತಾ ಅವರು ಎಕ್ಸ್ನಲ್ಲಿನ ಪೋಸ್ಟ್ನಲ್ಲಿ ತಿಳಿಸಿದ್ದಾರೆ.







