ಚೀನಾದ ಗೂಢಚಾರಿಣಿಯೊಂದಿಗಿನ ನಂಟಿನ ಬಗ್ಗೆ Nvidia ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದ ಜೆನ್ಸನ್ ಹುವಾಂಗ್: ರಾಯಿಟರ್ಸ್ ವರದಿ
ಆಲಿಸ್ ಹುವಾಂಗ್ ಜೊತೆಗಿನ ಸಂಪರ್ಕವನ್ನು ಸಾಮಾನ್ಯ ವ್ಯವಹಾರಿಕ ಸಂಬಂಧ ಎಂದು ಬಿಂಬಿಸಿದ್ದ ಮಾಜಿ CEO

Photo credit : ndtv
ಹೊಸದಿಲ್ಲಿ: ಚೀನಾದ ಗೂಢಚಾರಿಣಿ ಎನ್ನಲಾದ ಉದ್ಯಮಿ ಆಲಿಸ್ ಹುವಾಂಗ್ ಜೊತೆಗಿನ ಸಂಬಂಧದ ಸ್ವರೂಪದ ಬಗ್ಗೆ Nvidiaದ ಹಲವು ಉನ್ನತ ಅಧಿಕಾರಿಗಳಿಗೆ ಕಂಪೆನಿಯ ಮಾಜಿ CEO ಜೆನ್ಸನ್ ಹುವಾಂಗ್ ತಪ್ಪು ಮಾಹಿತಿ ನೀಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
Nvidiaದ ಜನರಲ್ ಕೌನ್ಸೆಲ್ ಟಿಮ್ ಟೆಟರ್ ಮತ್ತು ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಅಲಿಸನ್ ವ್ಯಾಗನ್ಫೆಲ್ಡ್ ಸೇರಿದಂತೆ ಕಂಪೆನಿಯ ಹಲವು ಹಿರಿಯ ಅಧಿಕಾರಿಗಳನ್ನು ಜೆನ್ಸನ್ ಹುವಾಂಗ್ ದಾರಿ ತಪ್ಪಿಸಿದ್ದಾರೆ ಎಂದು ಈ ಬೆಳವಣಿಗೆಗಳ ಬಗ್ಗೆ ತಿಳಿದಿರುವ ಇಬ್ಬರು ವ್ಯಕ್ತಿಗಳು ತಿಳಿಸಿದ್ದಾರೆ.
ಅಕ್ಟೋಬರ್ ತಿಂಗಳಿನಲ್ಲಿ ನಡೆದ ಸಂವಹನಗಳಿಗೆ ಸಂಬಂಧಿಸಿದ ಹಲವು ಸಂದೇಶಗಳನ್ನು ರಾಯಿಟರ್ಸ್ ಪರಿಶೀಲಿಸಿದ ವೇಳೆ ಈ ಮಾಹಿತಿ ಬಹಿರಂಗವಾಗಿದೆ.
ಗುರುವಾರ Nvidia ಸಿಇಒ ಹುದ್ದೆಗೆ ಹುವಾಂಗ್ ರಾಜೀನಾಮೆ ನೀಡಿದ್ದಾರೆ. ಕೃತಕ ಬುದ್ಧಿಮತ್ತೆಯ ಇತ್ತೀಚಿನ ಉತ್ಕರ್ಷಕ್ಕೆ ಪ್ರಮುಖ ತಂತ್ರಜ್ಞಾನ ಒದಗಿಸುವ ಮೂಲಕ ಚಿಪ್ ಉದ್ಯಮದಲ್ಲಿ ಅತ್ಯುನ್ನತ ಸ್ಥಾನಕ್ಕೇರಿದ್ದ ಅವರ ವೃತ್ತಿಜೀವನಕ್ಕೆ ಇದು ದೊಡ್ಡ ಹಿನ್ನಡೆಯಾಗಿದೆ.
ಪತ್ನಿಗೆ ವಿಶ್ವಾಸದ್ರೋಹ ಬಗೆದಿದ್ದಕ್ಕಾಗಿ ಮತ್ತು ಕಂಪೆನಿಯನ್ನು ನಿರಾಶೆಗೊಳಿಸಿದ್ದಕ್ಕಾಗಿ ಹುವಾಂಗ್ ರವಿವಾರ ಹೇಳಿಕೆಯೊಂದರಲ್ಲಿ ಕ್ಷಮೆಯಾಚಿಸಿದ್ದರು. ಆದರೆ, ತಮ್ಮ ಹೇಳಿಕೆಯಲ್ಲಿ ಆಲಿಸ್ ಹುವಾಂಗ್ ಅವರ ಹೆಸರನ್ನು ಉಲ್ಲೇಖಿಸಿರಲಿಲ್ಲ.
ಆಲಿಸ್ ಹುವಾಂಗ್ ಅವರು Nvidiaದ ಗ್ರಾಹಕ ಸಂಸ್ಥೆಯಾದ ಮೆಗಾಸ್ಪೀಡ್ ಇಂಟರ್ನ್ಯಾಷನಲ್ನ ಮಾಜಿ ಉನ್ನತ ಕಾರ್ಯನಿರ್ವಾಹಕಿ. ಚೀನಾಕ್ಕಾಗಿ ಗೂಢಚಾರಿಣಿಯಾಗಿ ಕೆಲಸ ಮಾಡಿರುವ ಶಂಕೆಯಲ್ಲಿ ಅಮೆರಿಕದ ಅಧಿಕಾರಿಗಳು ಅವರ ವಿರುದ್ಧ ತನಿಖೆ ನಡೆಸುತ್ತಿದ್ದರು.
Nvidia ಉದ್ಯೋಗಿಯೊಬ್ಬರೊಂದಿಗೆ ಜೆನ್ಸನ್ ಹುವಾಂಗ್ ವಿವಾಹೇತರ ಸಂಬಂಧ ಹೊಂದಿದ್ದರು ಎಂದು ಈ ವಾರದ ಆರಂಭದಲ್ಲಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. ಗುರುವಾರ Nvidia ಉದ್ಯೋಗಿಯೊಬ್ಬರೊಂದಿಗೆ ಹುವಾಂಗ್ ಮತ್ತೊಂದು ನಿಕಟ ಸಂಬಂಧ ಹೊಂದಿದ್ದರು ಎಂದು ರಾಯಿಟರ್ಸ್ ವರದಿ ಮಾಡಿತ್ತು.
ಸಾಮಾನ್ಯ ವ್ಯವಹಾರಿಕ ಸಂಪರ್ಕ ಎಂದಿದ್ದ ಹುವಾಂಗ್ :
2025ರ ಕೊನೆಯ ತ್ರೈಮಾಸಿಕದಲ್ಲಿ ಮತ್ತು 2026ರ ಅಕ್ಟೋಬರ್ ನಲ್ಲಿ ಆಲಿಸ್ ಹುವಾಂಗ್ ಹಾಗೂ ಮೆಗಾಸ್ಪೀಡ್ ನೊಂದಿಗಿನ ತಮ್ಮ ಸಂಪರ್ಕದ ಬಗ್ಗೆ ಮಾಧ್ಯಮಗಳು ಪ್ರಶ್ನೆಗಳನ್ನು ಎತ್ತಿದ್ದವು. ಈ ಹಿನ್ನೆಲೆಯಲ್ಲಿ Nvidiaದ ಕೆಲವು ಹಿರಿಯ ಅಧಿಕಾರಿಗಳು ಜೆನ್ಸನ್ ಹುವಾಂಗ್ ಅವರಿಂದ ಸ್ಪಷ್ಟನೆ ಕೇಳಿದ್ದರು.
ಎರಡೂ ಸಂದರ್ಭಗಳಲ್ಲಿ ಆಲಿಸ್ ಹುವಾಂಗ್ ಅವರೊಂದಿಗಿನ ತಮ್ಮ ಸಂಪರ್ಕ ಸೂಕ್ತವಾಗಿತ್ತು ಎಂದು ಹುವಾಂಗ್ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ, ರಾಯಿಟರ್ಸ್ 2025ರ ಸಂದೇಶಗಳನ್ನು ಪರಿಶೀಲಿಸಿಲ್ಲ. 2026ರ ಅಕ್ಟೋಬರ್ನ ಸಂದೇಶಗಳನ್ನು ಮಾತ್ರ ಪರಿಶೀಲಿಸಿದೆ.
ಅಕ್ಟೋಬರ್ನಲ್ಲಿ ಕಳುಹಿಸಲಾದ ಎರಡು ಪ್ರತ್ಯೇಕ ಸಂದೇಶಗಳಲ್ಲಿ ಟಿಮ್ ಟೆಟರ್ ಮತ್ತು ಅಲಿಸನ್ ವ್ಯಾಗನ್ಫೆಲ್ಡ್ ಸೇರಿದಂತೆ Nvidiaದ ಹಿರಿಯ ಅಧಿಕಾರಿಗಳಿಗೆ ಹುವಾಂಗ್ ಪ್ರತಿಕ್ರಿಯಿಸಿದ್ದರು. ಆಲಿಸ್ ಹುವಾಂಗ್ ಅವರೊಂದಿಗಿನ ಸಂಪರ್ಕವು ಗ್ರಾಹಕರೊಂದಿಗಿನ ಸಾಮಾನ್ಯ ವ್ಯವಹಾರಿಕ ಸಂಬಂಧದ ಭಾಗವಾಗಿತ್ತು ಎಂದು ಅವರು ತಿಳಿಸಿದ್ದರು. ಮೆಗಾಸ್ಪೀಡ್ ನೊಂದಿಗಿನ ತಮ್ಮ ಸಂಪರ್ಕವೂ ದೈನಂದಿನ ವ್ಯವಹಾರಿಕ ಸ್ವರೂಪದ್ದಾಗಿತ್ತು ಎಂದು ಇತರ ಸಂದೇಶಗಳಲ್ಲಿ ಸ್ಪಷ್ಟಪಡಿಸಿದ್ದರು.
ಕಳೆದ ವರ್ಷದ ಅಕ್ಟೋಬರ್ ನಲ್ಲಿ ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ್ದ ವರದಿಯಲ್ಲಿ ಜೆನ್ಸನ್ ಹುವಾಂಗ್ ಮತ್ತು ಆಲಿಸ್ ಹುವಾಂಗ್ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದ ಸಭೆಗಳ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಈ ವರದಿಯ ಹಿನ್ನೆಲೆಯಲ್ಲಿ ಪತ್ರಿಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆಯೂ Nvidiaದಲ್ಲಿ ಚರ್ಚೆ ನಡೆದಿತ್ತು ಎಂದು ಮೂಲಗಳು ತಿಳಿಸಿವೆ.
ಈ ವರದಿಯ ಬಳಿಕ 2025ರಲ್ಲಿ ತಮ್ಮ ಸಂವಹನಗಳ ಬಗ್ಗೆ Nvidiaದ ಕೆಲವು ಹಿರಿಯ ಅಧಿಕಾರಿಗಳೊಂದಿಗೆ ಜೆನ್ಸನ್ ಹುವಾಂಗ್ ಚರ್ಚಿಸಿದ್ದರು. ಆದರೆ, ಆ ಸಂವಹನಗಳನ್ನು ಅವರು ಸಂಬಂಧ ಎಂದು ಹೇಳಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಅಂತಿಮವಾಗಿ Nvidia ಅಥವಾ ಹುವಾಂಗ್ ಪತ್ರಿಕೆಯ ವಿರುದ್ಧ ಮೊಕದ್ದಮೆ ಹೂಡಲಿಲ್ಲ. ಪತ್ರಿಕೆಗೆ ಯಾವುದೇ ಕಾನೂನು ಬೇಡಿಕೆ ಬಂದಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ವಕ್ತಾರರು ತಿಳಿಸಿದ್ದಾರೆ.
ಆಲಿಸ್ ಹುವಾಂಗ್ ಅವರೊಂದಿಗಿನ ಜೆನ್ಸನ್ ಹುವಾಂಗ್ ಅವರ ಸಂಪರ್ಕ ಯಾವಾಗ ನಿಕಟವಾಯಿತು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ರಾಯಿಟರ್ಸ್ ಪರಿಶೀಲಿಸಿದ ಆನ್ಲೈನ್ ಫೋಟೋಗಳಲ್ಲಿ 2023ರ ಡಿಸೆಂಬರ್ ನಿಂದೀಚೆಗೆ ಅಮೆರಿಕ, ಚೀನಾ ಸೇರಿದಂತೆ ವಿವಿಧೆಡೆ ಅವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿರುವುದು ಕಂಡುಬಂದಿದೆ.
ಸ್ವತಂತ್ರ ತನಿಖೆಗೆ ಕಾನೂನು ಸಂಸ್ಥೆ ನೇಮಕ :
ಆಲಿಸ್ ಹುವಾಂಗ್ ಅವರೊಂದಿಗಿನ ಜೆನ್ಸನ್ ಹುವಾಂಗ್ ಅವರ ಸಂಬಂಧ ಮತ್ತು ಅವರು ಚೀನಾಕ್ಕಾಗಿ ಗೂಢಚಾರಿಣಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಅಮೆರಿಕದ ಅಧಿಕಾರಿಗಳ ಅನುಮಾನಗಳ ಕುರಿತು ನ್ಯೂಯಾರ್ಕ್ ಟೈಮ್ಸ್ ಹಾಗೂ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದ್ದವು.
ಈ ವರದಿಗಳ ಹಿನ್ನೆಲೆಯಲ್ಲಿ ನ. 10ರಂದು Nvidiaದ ಮಂಡಳಿಯ ಸ್ವತಂತ್ರ ಸದಸ್ಯರು ಪ್ರಕರಣದ ಬಗ್ಗೆ ಸ್ವತಂತ್ರ ತನಿಖೆ ನಡೆಸಲು ವಾಲ್ ಸ್ಟ್ರೀಟ್ನ ಕಾನೂನು ಸಂಸ್ಥೆಯಾದ ವಾಚ್ಟೆಲ್, ಲಿಪ್ಟನ್, ರೋಸೆನ್ ಆ್ಯಂಡ್ ಕ್ಯಾಟ್ಜ್ ಅವರನ್ನು ನೇಮಿಸಿರುವುದಾಗಿ ತಿಳಿಸಿದ್ದಾರೆ.
ಆಲಿಸ್ ಹುವಾಂಗ್ ಚೀನಾ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿಲ್ಲ, ಅವರು ಗೂಢಚಾರಿಣಿಯಲ್ಲ ಎಂದು ಬೀಜಿಂಗ್ ನಿರಾಕರಿಸಿದೆ.
ಅ. 29ರಂದು ಬ್ಲೂಮ್ಬರ್ಗ್ಗೆ ನೀಡಿದ ಸಂದರ್ಶನದಲ್ಲಿ ಜೆನ್ಸನ್ ಹುವಾಂಗ್, ಆಲಿಸ್ ಹುವಾಂಗ್ ಬಗ್ಗೆ ಅಮೆರಿಕ ಸರ್ಕಾರ ತನಗೆ ಯಾವುದೇ ಅನುಮಾನಗಳನ್ನು ತಿಳಿಸಿಲ್ಲ ಎಂದು ಹೇಳಿದ್ದರು.
Nvidia ಷೇರುಗಳ ಮೌಲ್ಯದಲ್ಲಿ ಭಾರಿ ಕುಸಿತ :
ಇದೇ ವೇಳೆ, ಅ. 6ರಂದು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದ Nvidia ಷೇರುಗಳ ಮೌಲ್ಯ ಶೇ. 30ಕ್ಕಿಂತಲೂ ಹೆಚ್ಚು ಕುಸಿದಿದೆ. ಇದರಿಂದಾಗಿ ಕಂಪೆನಿಯ ಮಾರುಕಟ್ಟೆ ಬಂಡವಾಳದಲ್ಲಿ 1.8 ಟ್ರಿಲಿಯನ್ ಡಾಲರ್ ಗಿಂತಲೂ ಹೆಚ್ಚಿನ ಮೌಲ್ಯ ನಷ್ಟವಾಗಿದೆ.
Nvidiaದ ಜನರಲ್ ಕೌನ್ಸೆಲ್ ಟಿಮ್ ಟೆಟರ್ ಅವರು ಪ್ರತಿಕ್ರಿಯೆ ಕೋರಿ ಕಳುಹಿಸಿದ ಮನವಿಗೆ ಉತ್ತರಿಸಿಲ್ಲ. ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಅಲಿಸನ್ ವ್ಯಾಗನ್ಫೆಲ್ಡ್ ಕೂಡ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಜೆನ್ಸನ್ ಹುವಾಂಗ್ ಅವರ ಪ್ರತಿನಿಧಿ ಮತ್ತು Nvidia ವಕ್ತಾರರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಆಲಿಸ್ ಹುವಾಂಗ್ ಅವರ ವ್ಯವಹಾರ ಕಾರ್ಡ್ನಲ್ಲಿದ್ದ ದೂರವಾಣಿ ಸಂಖ್ಯೆ ಮತ್ತು ಇಮೇಲ್ ವಿಳಾಸಕ್ಕೆ ಸಂಪರ್ಕಿಸಲು ನಡೆಸಿದ ಪ್ರಯತ್ನಗಳಿಗೂ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ರಾಯಿಟರ್ಸ್ ವರದಿ ಉಲ್ಲೇಖಿಸಿದೆ.






