ಚೀನಾ-ಭಾರತ ನಡುವಿನ ಸ್ನೇಹ ಉತ್ತಮ ಆಯ್ಕೆ: ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್

PC : PTI
ಬೀಜಿಂಗ್: ಭಾರತ ಮತ್ತು ಚೀನಾ ಸ್ನೇಹಿತರಾಗಿರುವುದು ಉತ್ತಮ ಆಯ್ಕೆಯಾಗಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯೊಂದಿಗೆ ದ್ವಿಪಕ್ಷೀಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತ ಮತ್ತು ಚೀನಾ ಪೂರ್ವ ಏಶ್ಯದಲ್ಲಿನ ಎರಡು ಪುರಾತನ ನಾಗರಿಕತೆಗಳಾಗಿವೆ ಎಂದು ಶ್ಲಾಘಿಸಿದರು.
ಪ್ರಧಾನಿ ನರೇಂದ್ರ ಮೋದಿಯನ್ನು ಚೀನಾಗೆ ಸ್ವಾಗತಿಸಿದ ಕ್ಸಿ ಜಿನ್ ಪಿಂಗ್, ರಶ್ಯದಲ್ಲಿ ನಡೆದಿದ್ದ ತಮ್ಮಿಬ್ಬರ ಕೊನೆಯ ಭೇಟಿಯನ್ನು ಸ್ಮರಿಸಿದರು. ಅಕ್ಟೋಬರ್ 2024ರಲ್ಲಿ ರಶ್ಯದಲ್ಲಿ ಆಯೋಜನೆಗೊಂಡಿದ್ದ ಬ್ರಿಕ್ಸ್ ಶೃಂಗಸಭೆಯಲ್ಲಿ ಉಭಯ ನಾಯಕರು ಪರಸ್ಪರ ಭೇಟಿಯಾಗಿದ್ದರು.
“ನಿಮ್ಮನ್ನು ಮತ್ತೆ ಭೇಟಿಯಾಗುತ್ತಿರುವುದು ತುಂಬಾ ಸಂತಸದಾಯಕವಾಗಿದೆ. ಶಾಂಘೈ ಕೋ ಆಪರೇಷನ್ ಆರ್ಗನೈಸೇಷನ್ ಶೃಂಗಸಭೆಗೆ ನಾನು ನಿಮ್ಮನ್ನು ಸ್ವಾಗತಿಸುತ್ತೇನೆ. ಕಳೆದ ಬಾರಿ ಕಝನ್ ನಲ್ಲಿ ನಾವು ಯಶಸ್ವಿ ಭೇಟಿ ಮಾಡಿದ್ದೆವು. ನಾವು ಜಗತ್ತಿನ ಎರಡು ಅತ್ಯಧಿಕ ಜನನಿಬಿಡ ದೇಶಗಳಾಗಿದ್ದು, ದಕ್ಷಿಣ ಜಗತ್ತಿನ ಪ್ರಮುಖ ಸದಸ್ಯರೂ ಆಗಿದ್ದೇವೆ. ನಾವಿಬ್ಬರೂ ನಮ್ಮ ಜನರ ಸ್ವಾಸ್ಥ್ಯವನ್ನು ಸುಧಾರಿಸುವ, ಅಭಿವೃದ್ಧಿಶೀಲ ದೇಶಗಳನ್ನು ಬೆಂಬಲಿಸುವ ಹಾಗೂ ಪುನಶ್ಚೇತನಗೊಳಿಸುವ ಹಾಗೂ ಮಾನವ ಸಮಾಜದ ಪ್ರಗತಿಗೆ ಉತ್ತೇಜನ ನೀಡುವ ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊತ್ತಿದ್ದೇವೆ. ಎರಡೂ ದೇಶಗಳು ಸ್ನೇಹಿತರಾಗಿರುವುದು ಉತ್ತಮ ಆಯ್ಕೆಯಾಗಿದ್ದು, ಉತ್ತಮ ನೆರೆಹೊರೆ ಹಾಗೂ ಸೌಹಾರ್ದ ಬಾಂಧವ್ಯಗಳು, ಪರಸ್ಪರರ ಯಶಸ್ಸಿಗೆ ಸಹಕಾರ ನೀಡುವ ಪಾಲುದಾರರಾಗಲು ಭಾರತ ಮತ್ತು ಚೀನಾ ಒಟ್ಟಾಗಿವೆ” ಎಂದು ಕ್ಸಿ ಜಿನ್ ಪಿಂಗ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಗಳಿಗೆ ಈ ವರ್ಷ 75 ವರ್ಷ ತುಂಬುತ್ತಿದೆ ಎಂಬುದರತ್ತಲೂ ಅವರು ಬೊಟ್ಟು ಮಾಡಿದ್ದಾರೆ.







