ಗಾಝಾದಲ್ಲಿ ಸಾಂಕ್ರಾಮಿಕ ರೋಗ ಹರಡುವ ಅಪಾಯ: ವಿಶ್ವ ಆರೋಗ್ಯ ಸಂಸ್ಥೆ ಕಳವಳ

WHO \ Photo: NDTV
ಜಿನೆವಾ: ಗಾಝಾ ಪಟ್ಟಿಯಲ್ಲಿ ಸಾಂಕ್ರಾಮಿಕ ರೋಗ ಹರಡುವ ಅಪಾಯ ಹೆಚ್ಚಿದ್ದು ಆರೋಗ್ಯ ವ್ಯವಸ್ಥೆಯನ್ನು ಕ್ಷಿಪ್ರವಾಗಿ ಮರುಸ್ಥಾಪಿಸದಿದ್ದರೆ ಭೀಕರ ಮಾನವೀಯ ದುರಂತಕ್ಕೆ ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಕಳವಳ ವ್ಯಕ್ತಪಡಿಸಿದೆ.
ದಕ್ಷಿಣ ಗಾಝಾದ್ಯಂತ ಜನರ ಬೃಹತ್ ಸ್ಥಳಾಂತರ ಪ್ರಕ್ರಿಯೆ ಮುಂದುವರಿದಿದೆ. ಕೆಲವು ಕುಟುಂಬಗಳನ್ನು ಹಲವು ಬಾರಿ ಬಲವಂತದಿಂದ ಸ್ಥಳಾಂತರಿಸಲಾಗಿದೆ. ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಿಕ್ಕಿರಿದು ತುಂಬಿರುವ ಆರೋಗ್ಯ ಕೇಂದ್ರಗಳಲ್ಲಿ ಜನರು ಆಶ್ರಯ ಪಡೆಯುವಂತಾಗಿದೆ. ಇದು ಸಾಂಕ್ರಾಮಿಕ ರೋಗ ಹರಡುವ ಅಪಾಯವನ್ನು ಹೆಚ್ಚಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನಮ್ ಘೆಬ್ರಯೇಸಸ್ ಹೇಳಿದ್ದಾರೆ.
ತಾತ್ಕಾಲಿಕ ಶಿಬಿರಗಳಲ್ಲಿ ನೆಲೆಸಿರುವ ಜನರು ಅಕ್ಟೋಬರ್ ಮಧ್ಯಭಾಗದಿಂದ ಡಿಸೆಂಬರ್ ಮಧ್ಯದವರೆಗೆ ಹೆಚ್ಚಿನ ಪ್ರಮಾಣದಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಸುಮಾರು 1,80,000 ಜನರು ಉಸಿರಾಟದ ಸೋಂಕುಗಳಿಂದ ಬಳಲುತ್ತಿದ್ದಾರೆ. ಸುಮಾರು 1,36,400 ಅತಿಸಾರ ಪ್ರಕರಣ ವರದಿಯಾಗಿದ್ದು ಇದರಲ್ಲಿ 50%ದಷ್ಟು ಪ್ರಕರಣ 5 ವರ್ಷದ ಕೆಳಗಿನ ಮಕ್ಕಳಲ್ಲಿ ದಾಖಲಾಗಿದೆ. 55,400 ಚರ್ಮರೋಗದ ಪ್ರಕರಣ, 5,330 ಸಿಡುಬಿನ ಪ್ರಕರಣ, 42,700 ಚರ್ಮದ ದದ್ದು ಮತ್ತು ಅಲರ್ಜಿ ಪ್ರಕರಣ ವರದಿಯಾಗಿದೆ. ವಿಶ್ವ ಆರೋಗ್ಯಸಂಸ್ಥೆ ಮತ್ತು ಪಾಲುದಾರರು ಔಷಧಗಳನ್ನು ಪೂರೈಸುವ ಮೂಲಕ ರೋಗದ ಕಣ್ಗಾವಲು ಮತ್ತು ನಿಯಂತ್ರಣವನ್ನು ಹೆಚ್ಚಿಸುವ ಕಾರ್ಯವನ್ನು ಬೆಂಬಲಿಸುತ್ತಿದೆ. ಹೆಪಟೈಟಿಸ್ನಂತಹ ಸಾಂಕ್ರಾಮಿಕ ರೋಗಗಳ ತ್ವರಿತ ಪತ್ತೆ ಮತ್ತು ಪ್ರತಿಕ್ರಿಯೆಯನ್ನು ಬೆಂಬಲಿಸಲು ಪರೀಕ್ಷಾ ಕಿಟ್ಗಳು ಮತ್ತು ಸುರಕ್ಷಿತ ನೀರು, ಆಹಾರ, ನೈರ್ಮಲ್ಯ ವ್ಯವಸ್ಥೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಘೆಬ್ರಯೇಸಸ್ ಹೇಳಿದ್ದಾರೆ.
ಶುಕ್ರವಾರ ಇಸ್ರೇಲ್ ಜತೆಗಿನ ಸಮನ್ವಯದಲ್ಲಿ ಯುನಿಸೆಫ್ ಗಾಝಾಕ್ಕೆ 6ಲಕ್ಷ ಲಸಿಕೆಗಳನ್ನು ಒದಗಿಸಿದೆ. ಯುದ್ಧದ ಸಮಯದಲ್ಲಿ ಬಹುತೇಕ ಮಕ್ಕಳು ನಿಗದಿತ ಲಸಿಕೆಯನ್ನು ಪಡೆದಿರದ ಕಾರಣ ಈ ಲಸಿಕೆಗಳನ್ನು ಮಕ್ಕಳಲ್ಲಿ ಪ್ರತಿರಕ್ಷಣೆ ಶಕ್ತಿ ಹೆಚ್ಚಿಸಲು ಬಳಸಲಾಗುತ್ತದೆ ಎಂದವರು ವಿವರಿಸಿದ್ದಾರೆ.







