ಕೆನಡಾದಲ್ಲಿ ರಸ್ತೆ ಅಪಘಾತ | ಮೂವರು ಭಾರತೀಯರ ಸಹಿತ 4 ಮಂದಿ ಮೃತ್ಯು

ಟೊರಂಟೊ: ಕೆನಡಾದ ಒಂಟಾರಿಯೊ ಪ್ರಾಂತದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೂವರು ಭಾರತೀಯರ ಸಹಿತ 4 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಕೆನಡಾಕ್ಕೆ ಪ್ರವಾಸ ತೆರಳಿರುವ 60 ವರ್ಷದ ವ್ಯಕ್ತಿ ಹಾಗೂ 55 ವರ್ಷದ ಮಹಿಳೆ, ಅವರ 3 ತಿಂಗಳ ಮೊಮ್ಮಗು(ಮೂವರೂ ಭಾರತೀಯರು) ಹಾಗೂ ಅಪಘಾತಕ್ಕೆ ಒಳಗಾದ ಕಾರಿನ ಚಾಲಕ ಮೃತಪಟ್ಟರೆ, ಮಗುವಿನ ತಂದೆ ಮತ್ತು ತಾಯಿ ಗಾಯಗೊಂಡಿದ್ದು ತಾಯಿಯ ಸ್ಥಿತಿ ಗಂಭೀರವಾಗಿದೆ ಎಂದು ಒಂಟಾರಿಯೊ ವಿಶೇಷ ತನಿಖಾ ತಂಡ(ಎಸ್‍ಐಯು) ಹೇಳಿದೆ.
ವ್ಯಾನ್ ಒಂದನ್ನು ಪೊಲೀಸರ ಜೀಪು ಬೆನ್ನಟ್ಟಿದ್ದು ತಪ್ಪಿಸಿಕೊಳ್ಳುವ ಭರದಲ್ಲಿ ವಿಲ್ಬಿ ನಗರದ ಬಳಿಯ ಹೆದ್ದಾರಿಯಲ್ಲಿ ವ್ಯಾನ್ ವಿರುದ್ಧ ದಿಕ್ಕಿನಲ್ಲಿ ಚಲಿಸಿ ಎದುರಿಂದ ಬರುತ್ತಿದ್ದ 6 ವಾಹನಗಳಿಗೆ ಡಿಕ್ಕಿಯಾಗಿದೆ. ಭಾರತೀಯರು ಪ್ರಯಾಣಿಸುತ್ತಿದ್ದ ಕಾರು ಅಪಘಾತದಲ್ಲಿ ನಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ನಾಲ್ಕು ಮಂದಿ ಮೃತಪಟ್ಟಿದ್ದು ಇತರ ಇಬ್ಬರು ಗಾಯಗೊಂಡಿದ್ದಾರೆ. ಪ್ರಕರಣದಲ್ಲಿ ಪೊಲೀಸರ ವಾಹನವೂ ಒಳಗೊಂಡಿರುವುದರಿಂದ ಅಪಘಾತದ ಬಗ್ಗೆ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.





