ಎಸ್ಟೋನಿಯಾ ವಾಯು ಪ್ರದೇಶದಲ್ಲಿ ಉಕ್ರೇನ್ ಡ್ರೋನ್ ಹೊಡೆದುರುಳಿಸಿದ NATO

Photo Credit : x
ವಿಲ್ನಿಯಸ್/ರಿಗಾ, ಮೇ 19: ಎಸ್ಟೋನಿಯಾ ವಾಯು ಪ್ರದೇಶದ ಮೇಲೆ ಹಾರಾಡುತ್ತಿದ್ದ ಉಕ್ರೇನ್ನ ಡ್ರೋನ್ ಒಂದನ್ನು NATO ಯುದ್ಧ ವಿಮಾನ ಹೊಡೆದುರುಳಿಸಿರುವ ಘಟನೆ ಬಾಲ್ಟಿಕ್ ರಾಷ್ಟ್ರಗಳಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಡ್ರೋನ್ ಅನ್ನು ರಶ್ಯವೇ ಎಲೆಕ್ಟ್ರಾನಿಕ್ ಯುದ್ಧ ತಂತ್ರಜ್ಞಾನ ಬಳಸಿ ಬಾಲ್ಟಿಕ್ ಪ್ರದೇಶದತ್ತ ತಿರುಗಿಸಿತು ಎಂದು ಉಕ್ರೇನ್ ಆರೋಪಿಸಿದೆ.
ಎಸ್ಟೋನಿಯಾ ವಾಯು ಪ್ರದೇಶದತ್ತ ಡ್ರೋನ್ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಲಾಟ್ವಿಯಾ ಮಂಗಳವಾರ ಎಚ್ಚರಿಕೆ ನೀಡಿತ್ತು. ರಶ್ಯ ಗಡಿಯ ಸಮೀಪದ ನಿವಾಸಿಗಳು ಮನೆಯಲ್ಲೇ ಉಳಿಯುವಂತೆ ಸೂಚನೆ ನೀಡಿದ್ದಲ್ಲದೆ, NATOದ ಬಾಲ್ಟಿಕ್ ವಾಯು ಪೊಲೀಸ್ ದಳದ ಯುದ್ಧ ವಿಮಾನಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು.
ನಂತರ, ಯಾವುದೇ ಡ್ರೋನ್ ಎಸ್ಟೋನಿಯಾ ವಾಯು ಪ್ರದೇಶ ಪ್ರವೇಶಿಸಿರುವುದಕ್ಕೆ ಸ್ಪಷ್ಟ ಪುರಾವೆ ಲಭ್ಯವಾಗಿಲ್ಲ ಎಂದು ಲಾಟ್ವಿಯಾ ತಿಳಿಸಿತು. ಆದರೆ, ರಶ್ಯ ಗಡಿಯಲ್ಲಿನ ಎರಡಕ್ಕಿಂತ ಹೆಚ್ಚು ಕೌಂಟಿಗಳ ಮೇಲೆ ಮತ್ತೆ ವಾಯುದಾಳಿ ಎಚ್ಚರಿಕೆ ಘೋಷಿಸಲಾಗಿದ್ದು, NATO ಯುದ್ಧ ವಿಮಾನಗಳನ್ನು ಪುನಃ ನಿಯೋಜಿಸಲಾಯಿತು.
ಈ ಕುರಿತು ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಉಕ್ರೇನ್ ವಿದೇಶಾಂಗ ಸಚಿವಾಲಯದ ವಕ್ತಾರ ಹಿಯೋರ್ ಹಿಲ್ ತೈಖಿ, “ಇಲೆಕ್ಟ್ರಾನಿಕ್ ಯುದ್ಧ ಸಾಧನಗಳ ಮೂಲಕ ಉಕ್ರೇನ್ ಡ್ರೋನ್ ಗಳನ್ನು ರಶ್ಯವು ಬಾಲ್ಟಿಕ್ ರಾಷ್ಟ್ರಗಳತ್ತ ತಿರುಗಿಸುತ್ತಿದೆ. ಈ ಅನುದ್ದೇಶಿತ ಘಟನೆಗೆ ಎಸ್ಟೋನಿಯಾ ಹಾಗೂ ಇತರ ಬಾಲ್ಟಿಕ್ ರಾಷ್ಟ್ರಗಳ ಬಳಿ ವಿಷಾದ ವ್ಯಕ್ತಪಡಿಸುತ್ತೇವೆ” ಎಂದು ಹೇಳಿದ್ದಾರೆ.
ರಶ್ಯ ವಿರುದ್ಧ ಡ್ರೋನ್ ದಾಳಿಗಳನ್ನು ನಡೆಸಲು ಲಾಟ್ವಿಯಾ ಅಥವಾ ಎಸ್ಟೋನಿಯಾ ಪ್ರದೇಶಗಳನ್ನು ಬಳಸಲಾಗುತ್ತಿದೆ ಎಂಬ ಆರೋಪಗಳನ್ನು ಉಕ್ರೇನ್ ತಳ್ಳಿಹಾಕಿದೆ. ಬಾಲ್ಟಿಕ್ ರಾಷ್ಟ್ರಗಳ ಭೂಭಾಗವನ್ನು ರಶ್ಯ ವಿರುದ್ಧದ ಕಾರ್ಯಾಚರಣೆಗಳಿಗೆ ಬಳಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.






