ಜೂನ್ 2ರಂದು ತುರ್ಕಿಯಾದಲ್ಲಿ ಉಕ್ರೇನ್ ಜೊತೆ ಹೊಸ ಮಾತುಕತೆ: ರಶ್ಯ ಪ್ರಸ್ತಾಪ

PC : NDTV
ಮಾಸ್ಕೋ: ಶಾಂತಿ ಇತ್ಯರ್ಥಕ್ಕಾಗಿ ತನ್ನ ಯೋಜನೆಯನ್ನು ಮಂಡಿಸಲು ಮುಂದಿನ ಸೋಮವಾರ ತುರ್ಕಿಯಾ ಇಸ್ತಾಂಬುಲ್ ನಲ್ಲಿ ಉಕ್ರೇನ್ ಜೊತೆ ಹೊಸ ಮಾತುಕತೆ ನಡೆಸಲು ಬಯಸುವುದಾಗಿ ರಶ್ಯ ಹೇಳಿದೆ. ಆದರೆ ಸಭೆಗೂ ಮುನ್ನ ಈ ಯೋಜನೆಯನ್ನು ನೋಡುವುದು ಅಗತ್ಯವಾಗಿದೆ ಎಂದು ಉಕ್ರೇನ್ ಪ್ರತಿಕ್ರಿಯಿಸಿದೆ.
ಮೂರು ವರ್ಷದಿಂದ ಮುಂದುವರಿದಿರುವ ಸಂಘರ್ಷವನ್ನು ಕೊನೆಗೊಳಿಸಲು ರಾಜತಾಂತ್ರಿಕ ಪ್ರಯತ್ನಗಳು ಇತ್ತೀಚಿನ ತಿಂಗಳುಗಳಲ್ಲಿ ವೇಗ ಪಡೆದುಕೊಂಡಿವೆ. ಆದರೆ ಬೇಷರತ್ ಕದನ ವಿರಾಮಕ್ಕೆ ಒಪ್ಪಬೇಕೆಂಬ ಆಗ್ರಹವನ್ನು ರಶ್ಯ ಪದೇ ಪದೇ ತಿರಸ್ಕರಿಸಿದೆ. ಎರಡೂ ದೇಶಗಳ ನಿಯೋಗಗಳು ಈ ಹಿಂದೆ ಮೇ 16ರಂದು ಇಸ್ತಾಂಬುಲ್ ನಲ್ಲಿ ನಡೆಸಿದ್ದ ಸಭೆ ವಿಫಲವಾಗಿತ್ತು.
ಹೊಸ ಪ್ರಸ್ತಾಪದ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊಗೆ ವಿವರಿಸಲಾಗಿದೆ. ಜೂನ್ 2ರಂದು ಇಸ್ತಾಂಬುಲ್ ನಲ್ಲಿ ನಡೆಯಲಿರುವ ಸಭೆಯಲ್ಲಿ ನಮ್ಮ `ಯೋಜನೆ'ಯನ್ನು ಉಕ್ರೇನ್ ನಿಯೋಗಕ್ಕೆ ಸಲ್ಲಿಸಲು ನಾವು ಸಿದ್ಧವಿದ್ದೇವೆ ಎಂದು ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಉಕ್ರೇನ್ನ ರಕ್ಷಣಾ ಸಚಿವ ರುಸ್ತೆಮ್ ಉಮೆರೊವ್ `ರಶ್ಯದೊಂದಿಗೆ ಮುಂದಿನ ಸಭೆಗಳನ್ನು ನಾವು ವಿರೋಧಿಸುವುದಿಲ್ಲ. ಆದರೆ ನಮ್ಮ ಷರತ್ತುಗಳನ್ನು ಅವರಿಗೆ ಈಗಾಗಲೇ ನೀಡಿರುವುದರಿಂದ ಅವರ ಯೋಜನೆಯ ವಿವರಗಳನ್ನು ನಮಗೆ ಮೊದಲೇ ನೀಡಬೇಕು. ರಾಜತಾಂತ್ರಿಕತೆಯು ವಸ್ತುನಿಷ್ಠ ಆಗಿರಬೇಕು ಮತ್ತು ಮುಂದಿನ ಸಭೆ ಫಲಿತಾಂಶಗಳನ್ನು ನೀಡಬೇಕು' ಎಂದು ಆಗ್ರಹಿಸಿದ್ದಾರೆ.
ರಶ್ಯವು ಕದನ ವಿರಾಮ ಮಾತುಕತೆಯನ್ನು ಸ್ಥಗಿತಗೊಳಿಸುತ್ತಿರುವುದರಿಂದ ನಿರಾಶೆಗೊಂಡಿದ್ದು, ಸಂಘರ್ಷ ಕೊನೆಗೊಳಿಸಲು ಪುಟಿನ್ ಆಸಕ್ತರಾಗಿದ್ದಾರೆಯೇ ಎಂಬುದನ್ನು 2 ವಾರಗಳ ಒಳಗೆ ನಿರ್ಧರಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಎಚ್ಚರಿಕೆ ನೀಡಿದ್ದರು.







