ಶಾಂತಿ ಮಾತುಕತೆಗೆ ಉಕ್ರೇನ್ ಅಧ್ಯಕ್ಷರನ್ನು ಮಾಸ್ಕೋಗೆ ಆಹ್ವಾನಿಸಿದ ರಶ್ಯ

ವೊಲೊದಿಮಿರ್ ಝೆಲೆನ್ಸ್ಕಿ | Photo Credit : AP
ಮಾಸ್ಕೋ, ಜ.30: ರಶ್ಯ ಮತ್ತು ಉಕ್ರೇನ್ ಪರಸ್ಪರ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ನಿಲ್ಲಿಸಲು ಒಪ್ಪಿವೆ ಎಂಬ ವರದಿಯ ನಡುವೆ, ಶಾಂತಿ ಮಾತುಕತೆಗೆ ಮಾಸ್ಕೋಗೆ ಬರುವಂತೆ ಉಕ್ರೇನ್ ಅಧ್ಯಕ್ಷರಿಗೆ ಆಮಂತ್ರಣ ಕಳುಹಿಸಿರುವುದಾಗಿ ರಶ್ಯ ಹೇಳಿದೆ.
ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿಯಿಂದ ಇದುವರೆಗೆ ಪ್ರತಿಕ್ರಿಯೆ ಬಂದಿಲ್ಲ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದು ಮಾತುಕತೆಗೆ ಸೂಕ್ತ ಪರಿಸ್ಥಿತಿ ನಿರ್ಮಿಸಲು ಫೆಬ್ರವರಿ 1ರವರೆಗೆ ಉಕ್ರೇನ್ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಮಾಡಿದ ವೈಯಕ್ತಿಕ ಮನವಿಗೆ ರಶ್ಯ ಅಧ್ಯಕ್ಷರು ಒಪ್ಪಿದ್ದಾರೆ ಎಂದಿದ್ದಾರೆ.
ಈ ಮಧ್ಯೆ, ರಶ್ಯ ಮತ್ತು ಉಕ್ರೇನ್ ನಡುವಿನ ಹೊಸ ಸುತ್ತಿನ ಮತುಕತೆ ರವಿವಾರ(ಫೆಬ್ರವರಿ 1) ಅಬುಧಾಬಿಯಲ್ಲಿ ನಿಗದಿಯಾಗಿದೆ.
ಧೈರ್ಯವಿದ್ದರೆ ನೀವು ಉಕ್ರೇನ್ಗೆ ಬನ್ನಿ: ಪುಟಿನ್ಗೆ ಝೆಲೆನ್ಸ್ಕಿ ಉತ್ತರ
ಶಾಂತಿ ಮಾತುಕತೆಗೆ ಮಾಸ್ಕೋಗೆ ಬರುವಂತೆ ರಶ್ಯ ನೀಡಿರುವ ಆಹ್ವಾನಕ್ಕೆ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ `ನಾನು ಅವರನ್ನು (ಪುಟಿನ್) ಕೀವ್ಗೆ ಆಹ್ವಾನಿಸುತ್ತೇನೆ. ಧೈರ್ಯವಿದ್ದರೆ ಅವರು ಬರಲಿ' ಎಂದು ಪ್ರತಿಕ್ರಿಯಿಸಿರುವುದಾಗಿ ವರದಿಯಾಗಿದೆ.
ರಶ್ಯವು ನಮ್ಮ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವುದನ್ನು ನಿಲ್ಲಿಸಿದರೆ ಉಕ್ರೇನ್ ಕೂಡಾ ದಾಳಿಯನ್ನು ನಿಲ್ಲಿಸುತ್ತದೆ. ನಾವು ಯುದ್ದವನ್ನು ಕೊನೆಗೊಳಿಸಲು ಬಯಸಿದ್ದೇವೆ ಮತ್ತು ಉದ್ವಿಗ್ನತೆ ಕಡಿಮೆಗೊಳಿಸುವ ಕ್ರಮಗಳಿಗೆ ಸಿದ್ಧವಿದ್ದೇವೆ. ಶಾಂತಿ ಮಾತುಕತೆಗೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಹಾಗೂ ರಶ್ಯ ಅಧ್ಯಕ್ಷರನ್ನು ಭೇಟಿಯಾಗಲು ಸಿದ್ಧ. ಮಾತುಕತೆಗಾಗಿ ರಶ್ಯ ಹೊರತುಪಡಿಸಿ ಬೇರೆ ಯಾವುದೇ ದೇಶಕ್ಕೂ ಹೋಗಲು ಸಿದ್ಧ ' ಎಂದು ಝೆಲೆನ್ಸ್ಕಿ ಹೇಳಿರುವುದಾಗಿ ವರದಿಯಾಗಿದೆ.







