ಅಮೆರಿಕಕ್ಕೆ ಮೊದಲ ಕಂತಿನ ಡೀಸೆಲ್ ರವಾನಿಸಿದ ರಶ್ಯ: 40,000 ಟನ್ ಡೀಸೆಲ್ ಹೊತ್ತ ಹಡಗು ಅಮೆರಿಕದತ್ತ ಪ್ರಯಾಣ

ಸಾಂದರ್ಭಿಕ ಚಿತ್ರ | Photo Credit : X
ಮಾಸ್ಕೊ: ರಶ್ಯ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಈ ತಿಂಗಳು ನಡೆದ ಒಪ್ಪಂದದ ನಂತರ, 40,000 ಮೆಟ್ರಿಕ್ ಟನ್ ರಶ್ಯದ ಡೀಸೆಲ್ ಹೊತ್ತ ಟ್ಯಾಂಕರ್ ಹಡಗು ನ್ಯೂಯಾರ್ಕ್ನತ್ತ ಪ್ರಯಾಣಿಸುತ್ತಿದೆ ಎಂದು ಹಡಗು ಟ್ರ್ಯಾಕಿಂಗ್ ಡೇಟಾ `ಎಲ್ಎಸ್ಇಜಿ' ಶುಕ್ರವಾರ ಮಾಹಿತಿ ನೀಡಿದೆ.
ನವೆಂಬರ್ 3ರಂದು ನಡೆಯಲಿರುವ ಅಮೆರಿಕದ ಮಧ್ಯಂತರ ಅವಧಿಯ ಚುನಾವಣೆಗೂ ಮುನ್ನ, ಗಗನಕ್ಕೇರುತ್ತಿರುವ ಡೀಸೆಲ್ ಬೆಲೆಗಳನ್ನು ಇಳಿಸುವ ತಮ್ಮ ಪ್ರಯತ್ನಗಳ ಭಾಗವಾಗಿ ರಶ್ಯದ ಡೀಸೆಲ್ ಆಮದು ಮಾಡಿಕೊಳ್ಳುವ ಈ ಅನಿರೀಕ್ಷಿತ ಒಪ್ಪಂದವನ್ನು ಟ್ರಂಪ್ ಘೋಷಿಸಿದ್ದರು.
ಶಿಪ್ಪಿಂಗ್ ಡೇಟಾ ಪ್ರಕಾರ, ಮಾಲ್ಟಾ ಧ್ವಜವನ್ನು ಹೊಂದಿರುವ ಮಧ್ಯಮ ಗಾತ್ರದ `ಅಜಿಯೊಯ್ ಫನೆಂಡೆಸ್' ಎಂಬ ಟ್ಯಾಂಕರ್ ಹಡಗಿಗೆ ಅಕ್ಟೋಬರ್ 22ರಂದು ರಶ್ಯದ ಬಾಲ್ಟಿಕ್ ಬಂದರು ಪ್ರಿಮೊಸ್ರ್ಕ್ನಲ್ಲಿ 40,000 ಮೆಟ್ರಿಕ್ ಟನ್ `ಅಲ್ಟ್ರಾ-ಲೋ ಸಲ್ಫರ್' ಡೀಸೆಲ್ ಅನ್ನು ಲೋಡ್ ಮಾಡಲಾಗಿದೆ. ಇದು ನವೆಂಬರ್ 7ರಂದು ಅಮೆರಿಕ ತಲುಪುವ ನಿರೀಕ್ಷೆಯಿದೆ. 40,000 ಟನ್ಗಳ ಡೀಸೆಲ್ ಸುಮಾರು 3 ಲಕ್ಷ ಬ್ಯಾರೆಲ್ಗಳಿಗೆ ಸಮನಾಗಿರುತ್ತದೆ. ಇದು ಅಮೆರಿಕದ ಅರ್ಥವ್ಯವಸ್ಥೆಯು ಒಂದೇ ದಿನದಲ್ಲಿ ಬಳಸುವ ಸುಮಾರು 40 ಲಕ್ಷ ಬ್ಯಾರೆಲ್ ಡೀಸೆಲ್ನ ಶೇಕಡಾ 7ರಷ್ಟಾಗಿದೆ.
ಮಾಜಿ ಅಧ್ಯಕ್ಷ ಜೋ ಬೈಡನ್ 2022ರಲ್ಲಿ ರಶ್ಯದ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಅಮೆರಿಕ ಆಮದಿನ ಮೇಲೆ ನಿಷೇಧ ಘೋಷಿಸಿದ ನಂತರ, ಅಮೆರಿಕ ಆಮದು ಮಾಡಿಕೊಳ್ಳುತ್ತಿರುವ ಮೊದಲ ಸರಕು ಇದಾಗಿದೆ. ರಶ್ಯ ಮತ್ತು ಅಮೆರಿಕದ ಕಂಪೆನಿಗಳು ವಿತರಣೆಗಾಗಿ ಒಪ್ಪಂದಗಳನ್ನು ರೂಪಿಸುತ್ತಿರುವುದರಿಂದ ಹೆಚ್ಚುವರಿ ರವಾನೆಗಳು ಕೂಡ ಮುಂದುವರಿಯಲಿವೆ ಎಂದು ರಶ್ಯದ ಉಪ ಪ್ರಧಾನಮಂತ್ರಿ ಅಲೆಕ್ಸಾಂಡರ್ ನೊವಾಕ್ ಹೇಳಿದ್ದಾರೆ. ಒಪ್ಪಂದಕ್ಕೆ ಸಂಬಂಧಿಸಿದ ಕಷ್ಟಕರವಾದ ಪಾವತಿ ಸಮಸ್ಯೆಗಳನ್ನು ಬಗೆಹರಿಸಲು ಸಹಾಯ ಮಾಡುವಂತೆ ಅಮೆರಿಕದ ಖಜಾನೆ ಇಲಾಖೆಯು ಕೇಳಿದೆ ಎಂದು ರಶ್ಯದ ಹಣಕಾಸು ಇಲಾಖೆಯ ಅಧೀನದ `ಸಾರ್ವಭೌಮ ಸಂಪತ್ತು ನಿಧಿ'ಯ ಮುಖ್ಯಸ್ಥ ಹಾಗೂ ಪುಟಿನ್ ರಾಯಭಾರಿ ಕಿರಿಲ್ ಡಿಮಿಟ್ರಿವ್ ತಿಳಿಸಿದ್ದಾರೆ.






