ರಶ್ಯ : ನವಾಲ್ನಿ ವಿರುದ್ಧ ಹೊಸ ಕ್ರಿಮಿನಲ್ ಪ್ರಕರಣ ದಾಖಲು

ನವಾಲ್ನಿ | Photo: hindustantimes.com
ಮಾಸ್ಕೊ: ರಶ್ಯ ಸರಕಾರವನ್ನು ಕಟುವಾಗಿ ಟೀಕಿಸುವ ವಿರೋಧ ಪಕ್ಷದ ಮುಖಂಡ ಅಲೆಕ್ಸಿ ನವಾಲ್ ನಿ ವಿರುದ್ಧ ಹೊಸದಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಿರುವುದಾಗಿ ವರದಿಯಾಗಿದೆ.
ಉಗ್ರವಾದ ಸೇರಿದಂತೆ ಹಲವು ಆರೋಪಗಳಿಗೆ ಸಂಬಂಧಿಸಿದಂತೆ ಈಗಾಗಲೇ 30 ವರ್ಷಗಳಿಗೂ ಹೆಚ್ಚು ಅವಧಿಯ ಜೈಲುಶಿಕ್ಷೆಗೆ ಗುರಿಯಾಗಿರುವ ನವಾಲ್ನಿ, ಕಳೆದ 2 ವರ್ಷಗಳನ್ನು ಆಪಾದಿತ ದುಷ್ಕೃತ್ಯಗಳಿಗಾಗಿ ಏಕಾಂತ ಸೆರೆವಾಸದಲ್ಲಿ ಕಳೆದಿದ್ದಾರೆ. ಇದೀಗ ದಂಡಸಂಹಿತೆಯ ಆರ್ಟಿಕಲ್ 214ರಡಿ(ವಿಧ್ವಂಸಕ ಕೃತ್ಯ ತಡೆ) ನವಾಲ್ನಿ ವಿರುದ್ಧ ಹೊಸ ಪ್ರಕರಣ ದಾಖಲಿಸಲಾಗಿದೆ ಎಂದು ಅವರ ನಿಕಟವರ್ತಿಗಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಮಧ್ಯಮದಲ್ಲಿ ಹೇಳಿಕೆ ನೀಡಿರುವ ನವಾಲ್ನಿ ‘ಆರ್ಟಿಕಲ್ 214 ಅಂದರೇನು ಎಂಬ ಬಗ್ಗೆ ಮಾಹಿತಿಯಿಲ್ಲ ಮತ್ತು ಈ ಸೆಕ್ಷನ್ನಡಿ ವಿಧಿಸುವ ಶಿಕ್ಷೆಯ ಬಗ್ಗೆಯೂ ತಿಳಿದಿಲ್ಲ. ಆದರೆ ಅವರು ಪ್ರತೀ 3 ತಿಂಗಳಿಗೊಮ್ಮೆ ನನ್ನ ವಿರುದ್ಧ ಹೊಸ ಕ್ರಿಮಿನಲ್ ಪ್ರಕರಣ ದಾಖಲಿಸುತ್ತಿದ್ದಾರೆ. ಒಂದು ವರ್ಷಕ್ಕೂ ಅಧಿಕ ಸಮಯದಿಂದ ಜೈಲಿನೊಳಗೆ ಏಕಾಂತ ಸೆರೆವಾಸದಲ್ಲಿರುವ ವ್ಯಕ್ತಿಯೊಬ್ಬ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳ ಮೂಲಕ ವಿಧ್ವಂಸಕ ಕೃತ್ಯ ನಡೆಸಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ರಶ್ಯ ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಜನಪ್ರಿಯ ಮುಖಂಡರಾಗಿರುವ ನವಾಲ್ನಿಯನ್ನು ಬೆಂಬಲಿಗರು ನೆಲ್ಸನ್ ಮಂಡೇಲಾರಂತೆ ಬಿಂಬಿಸುತ್ತಿದ್ದು ಭವಿಷ್ಯದಲ್ಲಿ ಜೈಲಿನಿಂದ ಬಿಡುಗಡೆಗೊಂಡು ರಶ್ಯವನ್ನು ಮುನ್ನಡೆಸಲಿದ್ದಾರೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಕಳೆದ ವರ್ಷ ಉಕ್ರೇನ್ ಮೇಲಿನ ಆಕ್ರಮಣ ಆರಂಭವಾದಂದಿನಿಂದ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತನ್ನ ರಾಜಕೀಯ ವಿರೋಧಿಗಳ ವಿರುದ್ಧದ ಕಾರ್ಯಾಚರಣೆ ತೀವ್ರಗೊಳಿಸಿದ್ದು ಹಲವು ಪ್ರಮುಖ ಮುಖಂಡರು ದೇಶಭ್ರಷ್ಟರಾಗಿದ್ದಾರೆ.





