ಉಕ್ರೇನ್ ಮೇಲೆ 500ಕ್ಕೂ ಅಧಿಕ ಡ್ರೋನ್ ಮಳೆಗೆರೆದ ರಷ್ಯಾ

PC: x.com/ABC
ಕೀವ್: ಉಕ್ರೇನ್ ಮೇಲಿನ ದಾಳಿಯನ್ನು ತೀವ್ರಗೊಳಿಸಿರುವ ರಷ್ಯಾ 500ಕ್ಕೂ ಹೆಚ್ಚು ಡ್ರೋನ್ ಹಾಗೂ ಕ್ಷಿಪಣಿಗಳನ್ನು ಉಡಾಯಿಸಿದೆ. ಏತನ್ಮಧ್ಯೆ ಇದಕ್ಕೆ ಪ್ರತಿಕ್ರಿಯೆಯಾಗಿ ಉಕ್ರೇನ್ ಅಧ್ಯಕ್ಷರು ಹಾಗೂ ಯೂರೋಪಿಯನ್ ಮುಖಂಡರು ಉಕ್ರೇನ್ ನ ರಕ್ಷಣಾ ವ್ಯವಸ್ಥೆಯನ್ನು ಹೇಗೆ ಬಲಪಡಿಸಬೇಕು ಎಂಬ ಬಗ್ಗೆ ಚರ್ಚಿಸಬೇಕಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜತೆಗೆ ಇದುವರೆಗೆ ಯಶಸ್ವಿಯಾಗದ ಅಮೆರಿಕ ನೇತೃತ್ವದ ಶಾಂತಿ ಪ್ರಯತ್ನಗಳಿಗೆ ಮತ್ತಷ್ಟು ಉತ್ತೇಜನ ನೀಡುವ ಅಗತ್ಯತೆಯನ್ನು ಪ್ರತಿಪಾದಿಸಿದ್ದಾರೆ.
ರಾತ್ರಿ ವೇಳೆ ನಡೆಸಿದ ಈ ದಿಢೀರ್ ದಾಳಿಯಲ್ಲಿ ರಷ್ಯಾ ವಿದ್ಯುತ್ ಘಟಕಗಳಂಥ ನಾಗರಿಕ ಮೂಲಸೌಕರ್ಯಗನ್ನು ಗುರಿ ಮಾಡಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ರಷ್ಯಾ ತನ್ನ ನೆರೆಯ ದೇಶದ ಮೇಲೆ ಸತತ ಮೂರನೇ ವರ್ಷವೂ ದಾಳಿ ಮುಂದುವರಿಸಿದೆ. ಪಶ್ಚಿಮ ಮತ್ತು ಕೇಂದ್ರ ಉಕ್ರೇನನ್ನು ಗುರಿ ಮಾಡಿ ಈ ದಾಳಿ ನಡೆದಿದ್ದು, ಕನಿಷ್ಠ ಐದು ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ವಾಯುಪಡೆ ಹೇಳಿದೆ.
ನಾಗರಿಕ ಪ್ರದೇಶಗಳ ಮೇಲಿನ ರಷ್ಯಾದ ವೈಮಾನಿಕ ದಾಳಿ ಮತ್ತು 1000 ಕಿಲೋಮೀಟರ್ ಉದ್ದದ ಗಡಿಯಲ್ಲಿ ಉಕ್ರೇನ್ ನ ರಕ್ಷಣಾ ವ್ಯವಸ್ಥೆಯನ್ನು ಭೇದಿಸುವ ರಷ್ಯಾದ ಸೇನಾ ದಾಳಿ ಇತ್ತೀಚಿನ ತಿಂಗಳಲ್ಲಿ ಸಂಘರ್ಷ ನಿಲ್ಲಿಸುವ ಟ್ರಂಪ್ ಪ್ರಯತ್ನದ ಹೊರತಾಗಿಯೂ ನಿಂತಿಲ್ಲ. ಯುದ್ಧವಿರಾಮದ ಟ್ರಂಪ್ ಪ್ರಸ್ತಾವವನ್ನು ಉಕ್ರೇನ್ ಒಪ್ಪಿಕೊಂಡಿದ್ದರೂ, ರಷ್ಯಾ ಇದಕ್ಕೆ ಸೊಪ್ಪು ಹಾಕಿಲ್ಲ.





