ಉಕ್ರೇನ್ ನಲ್ಲಿ 2014ರಲ್ಲಿ ನಡೆದಿದ್ದ ಮಲೇಶ್ಯಾ ವಿಮಾನ ಅಪಘಾತಕ್ಕೆ ರಶ್ಯ ಹೊಣೆ: ವಿಶ್ವಸಂಸ್ಥೆ ಸಮಿತಿ ವರದಿ

PC : PTI
ವಿಶ್ವಸಂಸ್ಥೆ: ಪೂರ್ವ ಉಕ್ರೇನ್ ನಲ್ಲಿ 2014ರ ಜುಲೈಯಲ್ಲಿ 298 ಪ್ರಯಾಣಿಕರ ಸಾವಿಗೆ ಕಾರಣವಾಗಿದ್ದ ಮಲೇಶ್ಯಾ ಏರ್ಲೈನರ್ ವಿಮಾನ ಅಪಘಾತಕ್ಕೆ ರಶ್ಯ ಹೊಣೆಯಾಗಿದೆ ಎಂದು ವಿಶ್ವಸಂಸ್ಥೆಯ ವಾಯುಯಾನ ಏಜೆನ್ಸಿ ಹೇಳಿದೆ.
ಆಸ್ಟ್ರೇಲಿಯಾ ಮತ್ತು ನೆದರ್ಲ್ಯಾಂಡ್ ದೇಶಗಳ ಪ್ರತಿಪಾದನೆ ವಾಸ್ತವಿಕವಾಗಿ ಮತ್ತು ಕಾನೂನುಪ್ರಕಾರ ಸಾಬೀತಾಗಿದೆ. 2014ರ ಮಲೇಶ್ಯನ್ ಏರ್ಲೈನ್ಸ್ ವಿಮಾನ ದುರಂತದಲ್ಲಿ ರಶ್ಯಾವು ಅಂತರಾಷ್ಟ್ರೀಯ ವಾಯು ಕಾನೂನಿನಡಿಯಲ್ಲಿ ತನ್ನ ಜವಾಬ್ದಾರಿಗಳನ್ನು ಎತ್ತಿಹಿಡಿಯುವಲ್ಲಿ ವಿಫಲವಾಗಿದೆ ಎಂದು ಅಂತರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ಹೇಳಿದೆ.
ಆಮ್ಸ್ಟರ್ ಡ್ಯಾಮ್ ನಿಂದ ಕೌಲಲಾಂಪುರಕ್ಕೆ ಪ್ರಯಾಣಿಸುತ್ತಿದ್ದ 292 ಜನರಿದ್ದ ಮಲೇಶ್ಯಾ ಏರ್ಲೈನ್ಸ್ನ ಬೋಯಿಂಗ್ 777 ವಿಮಾನ 2014ರ ಜುಲೈ 17ರಂದು ಪೂರ್ವ ಉಕ್ರೇನ್ ನ ಡೊನೆಟ್ಸ್ಕ್ ಪ್ರಾಂತದ ಗ್ರಬೋವ್ ಎಂಬಲ್ಲಿ ಪತನಗೊಂಡಿತ್ತು. ಪ್ರಕರಣದಲ್ಲಿ ಇಬ್ಬರು ರಶ್ಯನ್ನರಿಗೆ ಜೀವಾವಧಿ ಶಿಕ್ಷೆ ವಿಧಿಸಿ 2022ರಲ್ಲಿ ಹಾಲಂಡಿನ ನ್ಯಾಯಾಲಯ ತೀರ್ಪು ನೀಡಿತ್ತು. ಆದರೆ ಶಿಕ್ಷೆಗೊಳಗಾದ ಇಬ್ಬರು ನಾಗರಿಕರನ್ನು ಹಸ್ತಾಂತರಿಸಲು ರಶ್ಯ ನಿರಾಕರಿಸಿತ್ತು.
ವಿಮಾನಕ್ಕೆ ಅಪ್ಪಳಿಸಿದ್ದ ಕ್ಷಿಪಣಿ ಪೂರೈಕೆಗೆ ರಶ್ಯ ಅಧ್ಯಕ್ಷ ಪುಟಿನ್ ಅನುಮೋದಿಸಿದ್ದಾರೆ ಎಂಬುದಕ್ಕೆ ಬಲವಾದ ಸೂಚನೆಗಳಿವೆ ಎಂದು 2023ರಲ್ಲಿ ಅಂತರರಾಷ್ಟ್ರೀಯ ತನಿಖಾಧಿಕಾರಿಗಳ ತಂಡ ಹೇಳಿತ್ತು. ಆದರೆ ವಿಷಯಕ್ಕೆ ಸಂಬಂಧಿಸಿ ಇನ್ನಷ್ಟು ಶಂಕಿತರ ವಿಚಾರಣೆ ನಡೆಸಲು ಸಾಕಷ್ಟು ಪುರಾವೆಗಳಿಲ್ಲ ಎಂದು ತನಿಖಾ ತಂಡ ವರದಿ ಕಳೆದ ವರ್ಷ ನೀಡಿದ ಬಳಿಕ ತನಿಖೆಯನ್ನು ಅಮಾನತುಗೊಳಿಸಲಾಗಿತ್ತು. ಮೃತಪಟ್ಟಿದ್ದ 298 ಜನರಲ್ಲಿ 189 ಪ್ರಯಾಣಿಕರು ನೆದರ್ಲ್ಯಾಂಡ್ ಪ್ರಜೆಗಳು ಮತ್ತು ಸುಮಾರು 100 ಮಂದಿ ಕೌಲಲಾಂಪುರ ಮೂಲಕ ಆಸ್ಟ್ರೇಲಿಯಾಕ್ಕೆ ತೆರಳುತ್ತಿದ್ದ ನಿಯೋಗದ ಸದಸ್ಯರಾಗಿದ್ದರು.
ಉಕ್ರೇನ್ ಮಿಲಿಟರಿಯ ಜೆಟ್ ವಿಮಾನ ಮಲೇಶ್ಯಾದ ವಿಮಾನವನ್ನು ಹೊಡೆದುರುಳಿಸಿದೆ ಎಂದು ರಶ್ಯ ಪರ ಬಂಡುಕೋರರ ಗುಂಪು ಪ್ರತಿಪಾದಿಸಿತ್ತು. ವಿಮಾನ ದುರಂತಕ್ಕೆ ಉಕ್ರೇನ್ ಹೊಣೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆರೋಪಿಸಿದ್ದರು.
ವಿಶ್ವಸಂಸ್ಥೆ ವಾಯುಯಾನ ಏಜೆನ್ಸಿಯ ವರದಿಯನ್ನು ಸ್ವಾಗತಿಸಿರುವ ನೆದರ್ಲ್ಯಾಂಡ್ ವಿದೇಶಾಂಗ ಸಚಿವ ಕ್ಯಾಸ್ಪರ್ ವೆಲ್ಡಾಕ್ಯಾಂಪ್ ಮುಂದಿನ ವಾರಗಳಲ್ಲಿ ಸಮಿತಿಯು ಕಾನೂನು ಪರಿಹಾರ ಪ್ರಕ್ರಿಯೆಯ ಬಗ್ಗೆ ನಿರ್ಧರಿಸುತ್ತದೆ ಎಂದಿದ್ದಾರೆ







