ರಷ್ಯ ತೈಲ ನಿರ್ಬಂಧ ಸಡಿಲಿಕೆ | ಅವಧಿ ವಿಸ್ತರಣೆಗೆ ಝೆಲೆನ್ಸ್ಕಿ ವಿರೋಧ

ವೊಲೊಡಿಮಿರ್ ಝೆಲೆನ್ಸ್ಕಿ | Photo Credit : PTI
ಕೀವ್, ಎ.19: ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ಜಾಗತಿಕವಾಗಿ ತೈಲ ಬೆಲೆಗಳು ಗಗನಕ್ಕೇರಿರುವ ಹಿನ್ನೆಲೆಯಲ್ಲಿ, ರಷ್ಯ ತೈಲ ರಫ್ತಿಗೆ ವಿಧಿಸಿದ್ದ ನಿರ್ಬಂಧಗಳನ್ನು ಅಮೆರಿಕ ಸಡಿಲಿಸಿರುವುದನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರವಿವಾರ ಖಂಡಿಸಿದ್ದಾರೆ.
ರಷ್ಯದಿಂದ ತೈಲವನ್ನು ಖರೀದಿಸಲು ಪಾವತಿಸುವ ಪ್ರತಿ ಡಾಲರ್ ಯುದ್ಧಕ್ಕಾಗಿ ಬಳಸಲಾಗುತ್ತಿದೆ ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಉಕ್ರೇನ್ ಮೇಲೆ ವಿನಾಶಕಾರಿ ದಾಳಿಗಳನ್ನು ನಡೆಸಲು ಕೋಟ್ಯಾಂತರ ಡಾಲರ್ ಗಳನ್ನು ರಷ್ಯ ಸುರಿಯುತ್ತಿದೆ ಎಂದೂ ಹೇಳಿದ್ದಾರೆ.
ರಷ್ಯದಿಂದ ತೈಲ ಖರೀದಿಯ ಮೇಲಿನ ಅಂತಾರಾಷ್ಟ್ರೀಯ ನಿರ್ಬಂಧಗಳ ಸಡಿಲಿಕೆಯ ಅವಧಿಯನ್ನು ಇನ್ನೂ 30 ದಿನಗಳವರೆಗೆ ವಿಸ್ತರಿಸುವುದಾಗಿ ಅಮೆರಿಕದ ವಿತ್ತ ಕಾರ್ಯದರ್ಶಿ ಸ್ಕಾಟ್ ಬೆಸ್ಸೆಟ್ ಘೋಷಿಸಿದ ಎರಡು ದಿನಗಳ ಬಳಿಕ ಝೆಲೆನ್ಸ್ಕಿ ಈ ಹೇಳಿಕೆ ನೀಡಿದ್ದಾರೆ.
ಪ್ರಸ್ತುತ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಉಲ್ಲಂಘಿಸಿ 110ಕ್ಕೂ ಅಧಿಕ ಟ್ಯಾಂಕರ್ ಗಳು 12 ದಶಲಕ್ಷ ಟನ್ ಗಿಂತ ಹೆಚ್ಚು ಕಚ್ಚಾ ತೈಲವನ್ನು ಸಾಗಿಸುತ್ತಿವೆ. ಇದರಿಂದ ದೊರೆಯುವ 10 ಶತಕೋಟಿ ಡಾಲರ್ ಗಿಂತ ಹೆಚ್ಚಿನ ಮೊತ್ತವನ್ನು ನೇರವಾಗಿ ಉಕ್ರೇನ್ ವಿರುದ್ಧದ ದಾಳಿಗೆ ಬಳಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.






