ಸೌದಿಯಲ್ಲಿನ ಅಮೆರಿಕ ವಾಯುನೆಲೆಯ ಉಪಗ್ರಹ ಚಿತ್ರವನ್ನು ರಶ್ಯ ಒದಗಿಸಿದೆ: ಝೆಲೆನ್ ಸ್ಕಿ ಆರೋಪ

ಅಧ್ಯಕ್ಷ ವೊಲೊದಿಮಿರ್ ಝೆಲೆನ್ ಸ್ಕಿ | Photo Credit : PTI
ಕೀವ್, ಮಾ.29: ಇತ್ತೀಚೆಗೆ ದಾಳಿಗೆ ಗುರಿಯಾದ ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ಪ್ರಿನ್ಸ್ ಸುಲ್ತಾನ್ ವಾಯುನೆಲೆಯ ಕುರಿತ ಗುಪ್ತಚರ ಮಾಹಿತಿಯನ್ನು ದಾಳಿಗೂ ಮುನ್ನ ರಶ್ಯವು ಇರಾನ್ ಗೆ ಒದಗಿಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ ಸ್ಕಿ ಪ್ರತಿಪಾದಿಸಿದ್ದಾರೆ.
ಮಾರ್ಚ್ 24ರಿಂದ 26ರ ನಡುವೆ ರಷ್ಯದ ಉಪಗ್ರಹಗಳು ಮಧ್ಯಪ್ರಾಚ್ಯದಾದ್ಯಂತ ಇರುವ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳ ಹಲವು ಸೇನಾನೆಲೆಗಳ ಚಿತ್ರಗಳನ್ನು ಸೆರೆಹಿಡಿದಿವೆ. ಸೌದಿ ಅರೆಬಿಯಾ, ಖತರ್, ಕುವೈಟ್, ಟರ್ಕಿ ಹಾಗೂ ಹಿಂದೂ ಮಹಾಸಾಗರದಲ್ಲಿನ ಸೇನಾ ನೆಲೆಗಳು ಮತ್ತು ನಿರ್ಣಾಯಕ ಮೂಲಸೌಕರ್ಯಗಳು ಇದರಲ್ಲಿ ಸೇರಿವೆ.
ಕುವೈತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಹಿಂದೂ ಮಹಾಸಾಗರದಲ್ಲಿರುವ ಬ್ರಿಟನ್-ಅಮೆರಿಕ ಜಂಟಿ ಸೇನಾನೆಲೆ ಡೀಗೊ ಗಾರ್ಶಿಯಾದ ಕುರಿತ ಮಹತ್ವದ ಮಾಹಿತಿಯನ್ನು ರಷ್ಯ ನೀಡಿದೆ ಎಂದು ಗುಪ್ತಚರ ಸಂಸ್ಥೆಗಳು ವರದಿ ಮಾಡಿವೆ ಎಂದು ಝೆಲೆನ್ ಸ್ಕಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.





