ಉಕ್ರೇನ್ ಮೇಲೆ ಕ್ಷಿಪಣಿ ಮಳೆಗರೆದ ರಶ್ಯ, 4 ಮಂದಿ ಸಾವು; ವ್ಯಾಪಕ ಹಾನಿ

Photo : Ukrainian Emergency Service Handout
ಕೀವ್: ಸೋಮವಾರ ಬೆಳಗ್ಗಿನಿಂದ ರಶ್ಯವು ಉಕ್ರೇನ್ನಾದ್ಯಂತ ಪ್ರಮುಖ ನಗರಗಳನ್ನು ಗುರಿಯಾಗಿಸಿ ಕ್ಷಿಪಣಿಗಳ ಮಳೆಗರೆದಿದ್ದು, ಕನಿಷ್ಠ 4 ನಾಗರಿಕರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.
ಖಾರ್ಕಿವ್ ನಗರದ ಹೊರವಲಯದಲ್ಲಿ 63 ವರ್ಷದ ಮಹಿಳೆ, ಪಶ್ಚಿಮದ ಖೆಲ್ನಿಟ್ಸ್ಕಿ ವಲಯದಲ್ಲಿ ಇಬ್ಬರು ನಾಗರಿಕರು ಹತರಾಗಿದ್ದು ಮೂಲಸೌಕರ್ಯಕ್ಕೆ ವ್ಯಾಪಕ ಹಾನಿಯಾಗಿದೆ ಎಂದು ಖಾರ್ಕಿವ್ ವಲಯದ ಗವರ್ನರ್ ಒಲೆಹ್ ಸಿನೆಹುಬೊವ್ ಹೇಳಿದ್ದಾರೆ. ದಕ್ಷಿಣದ ಕ್ರಿವಿಯ್ರಿಹ್ ನಗರದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು ಹಲವು ಶಾಪಿಂಗ್ ಸೆಂಟರ್ ಗಳು ಮತ್ತು ಮನೆಗಳಿಗೆ ಹಾನಿಯಾಗಿದೆ ಎಂದು ನಗರದ ಮೇಯರ್ ಅಲೆಕ್ಸಾಂಡರ್ ವಿಲ್ಕುಲ್ ಮಾಹಿತಿ ನೀಡಿದ್ದಾರೆ.
ರಶ್ಯದಿಂದ ಕ್ರೂಸ್ ಕ್ಷಿಪಣಿಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿ ಮುಂದುವರಿಯುವ ಅಪಾಯವಿದೆ ಎಂದು ಉಕ್ರೇನ್ ವಾಯುಪಡೆ ಎಚ್ಚರಿಕೆ ನೀಡಿದ್ದರಿಂದ ದೇಶಾದ್ಯಂತ ವಾಯುದಾಳಿ ಅಲರ್ಟ್ ಘೋಷಿಸಲಾಗಿದೆ. ಶಾಂತಿಯುತ ನಗರಗಳನ್ನು ಗುರಿಯಾಗಿ ಶತ್ರು ಭೀಕರ ದಾಳಿ ನಡೆಸುತ್ತಿದ್ದಾನೆ. ಸಾವು-ನೋವು, ನಾಶ-ನಷ್ಟದ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಮೇಯರ್ ಕಚೇರಿ ಹೇಳಿಕೆ ನೀಡಿದೆ. ಆಗ್ನೇಯದ ಝಪೋರಿಝಿಯಾ ನಗರದಲ್ಲಿ 5 ಸ್ಫೋಟ ಸಂಭವಿಸಿದ್ದು ಕನಿಷ್ಠ 3 ಮಂದಿ ಗಾಯಗೊಂಡಿದ್ದಾರೆ. ಜನವಸತಿ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದ ಕಾರಣ ಹಲವು ಮನೆಗಳಿಗೆ ಹಾನಿಯಾಗಿದೆ. ಕೈಗಾರಿಕಾ ಪ್ರದೇಶದ ಮೇಲೆ ಕ್ಷಿಪಣಿ ಅಪ್ಪಳಿಸಿದ್ದು ಬೆಂಕಿ ಕಾಣಿಸಿಕೊಂಡಿದೆ ಎಂದು ಮೇಯರ್ ಇಹೊರ್ ಟೆರೆಖೋವ್ ಹೇಳಿದ್ದಾರೆ.







