ಪುಟಿನ್ ಜತೆ ನೇರ ಮಾತುಕತೆಗೆ ಸಿದ್ಧ ಎಂಬ ಉಕ್ರೇನ್ ಅಧ್ಯಕ್ಷರ ಹೇಳಿಕೆ ತಳ್ಳಿಹಾಕಿದ ರಶ್ಯ

ವ್ಲಾದಿಮಿರ್ ಪುಟಿನ್ , ವೊಲೊದಿಮಿರ್ ಝೆಲೆನ್ಸ್ಕಿ | PTI
ಮಾಸ್ಕೋ: ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆ ನೇರ ಮಾತುಕತೆಗೆ ಸಿದ್ಧ ಎಂಬ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿಕೆ `ಕೇವಲ ಪೊಳ್ಳು ಮಾತು' ಎಂದು ರಶ್ಯ ತಳ್ಳಿಹಾಕಿದೆ.
`ಇದು ಕೇವಲ ಪೊಳ್ಳು ಮಾತು ಎಂಬುದು ನಮಗೆ ತಿಳಿದಿದೆ. ಸಿದ್ಧತೆ ಎಂಬುದಕ್ಕೆ ಏನಾದರೂ ಆಧಾರ, ಪುರಾವೆ ಇರಬೇಕು. ಆದರೆ ಉಕ್ರೇನ್ ಅಧ್ಯಕ್ಷರ ಮಾತು ಮತ್ತು ಕೃತ್ಯಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಅಧ್ಯಕ್ಷ ಪುಟಿನ್ ಜತೆ ನೇರ ಭೇಟಿಯನ್ನು ನಿಷೇಧಿಸುವ ಆದೇಶಕ್ಕೆ 2022ರಲ್ಲಿ ಝೆಲೆನ್ಸ್ಕಿ ಸಹಿ ಹಾಕಿರುವುದನ್ನು ಇಲ್ಲಿ ಉಲ್ಲೇಖಿಸಬಹುದು ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ಝೆಲೆನ್ಸ್ಕಿ ಉಕ್ರೇನ್ ನ ಕಾನೂನುಬದ್ಧ ಅಧ್ಯಕ್ಷರಲ್ಲ ಎಂಬ ರಶ್ಯದ ನಿಲುವನ್ನು ಪುನರಾವರ್ತಿಸಿದ ಪೆಸ್ಕೋವ್, ಝೆಲೆನ್ಸ್ಕಿ ಉಕ್ರೇನ್ಗೆ ಬಹುದೊಡ್ಡ ಸಮಸ್ಯೆಯಾಗಿದ್ದಾರೆ ಎಂದು ಪ್ರತಿಪಾದಿಸಿದರು. ಆದರೆ ವಾಸ್ತವವಾಗಿ ಮಾತುಕತೆಗೆ ಉಕ್ರೇನ್ ಮುಕ್ತತೆ ಮತ್ತು ಆಸಕ್ತಿ ತೋರಿಸಬೇಕು ಎಂದು ಯುದ್ಧರಂಗದಲ್ಲಿ ರಶ್ಯ ಮಿಲಿಟರಿಯ ಮುನ್ನಡೆಯನ್ನು ಪರೋಕ್ಷವಾಗಿ ಉಲ್ಲೇಖಿಸಿ ಹೇಳಿದರು.