ರಶ್ಯಾದ ವಾಯುನೆಲೆ ಮೇಲೆ ಉಕ್ರೇನ್ ದಾಳಿ

ಕೀವ್: ರಶ್ಯದ ವೊರೊನೆಝ್ ಪ್ರಾಂತದ ಬೊರಿಸೊಗ್ಲೆಬ್ಸ್ಕ್ ವಾಯುನೆಲೆಯ ಮೇಲೆ ದಾಳಿ ನಡೆಸಿರುವುದಾಗಿ ಉಕ್ರೇನ್ ಸೇನೆಯ ಕಮಾಂಡರ್ ಶನಿವಾರ ಹೇಳಿದೆ.
ರಶ್ಯದ ಎಸ್ಯು-34, ಎಸ್ಯು-35ಎಸ್ ಮತ್ತು ಎಸ್ಯು-30 ಎಸ್ಎಂ ಯುದ್ಧವಿಮಾನಗಳು, ತರಬೇತಿ ಯುದ್ಧವಿಮಾನ, ಗ್ಲೈಡ್ ಬಾಂಬ್ಗಳ ಡಿಪೋ ಹೊಂದಿದ್ದ ವಾಯುನೆಲೆಯ ಮೇಲೆ ದಾಳಿ ನಡೆಸಿದ್ದು ವ್ಯಾಪಕ ಹಾನಿ ಸಂಭವಿಸಿದೆ ಎಂದು ಉಕ್ರೇನ್ನ ವಾಯುಪಡೆ ಹೇಳಿದೆ. ಈ ಹೇಳಿಕೆಗೆ ರಶ್ಯ ಪ್ರತಿಕ್ರಿಯಿಸಿಲ್ಲ. ಈ ಮಧ್ಯೆ, ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗ್ಗಿನವರೆಗೆ ರಶ್ಯ ಪಡೆ ಉಕ್ರೇನ್ ನ ಮೇಲೆ 322 ಡ್ರೋನ್ಗಳು ಹಾಗೂ ಕ್ಷಿಪಣಿಗಳನ್ನು ಪ್ರಯೋಗಿಸಿದ್ದು ಇದರಲ್ಲಿ 157 ಡ್ರೋನ್ ಗಳನ್ನು ಹೊಡೆದುರುಳಿಸಲಾಗಿದೆ. ಪಶ್ಚಿಮ ಉಕ್ರೇನ್ನ ಖೆಮೆಲ್ನಿಟ್ಸ್ಕಿ ಪ್ರಾಂತ ದಾಳಿಯ ಮುಖ್ಯ ಗುರಿಯಾಗಿತ್ತು ಎಂದು ಸ್ಥಳೀಯ ಗನರ್ವರ್ ಮಾಹಿತಿ ನೀಡಿದ್ದಾರೆ.
ರಶ್ಯದ ಗಡಿಯ ಸನಿಹದಲ್ಲಿರುವ ಈಶಾನ್ಯ ಉಕ್ರೇನ್ನ ಸುಮಿ ಪ್ರಾಂತದ ಸಮೀಪಕ್ಕೆ ರಶ್ಯದ ಪಡೆಗಳು ತಲುಪಿದ್ದು ಸಂಭಾವ್ಯ ಆಕ್ರಮಣವನ್ನು ಎದುರಿಸಲು ಉಕ್ರೇನ್ ತನ್ನ ಸೇನೆಯನ್ನು ಸಜ್ಜುಗೊಳಿಸುತ್ತಿದೆ ಎಂದು ವರದಿಯಾಗಿದೆ.