ರಶ್ಯ | ತೈಲ ಸಂಸ್ಕರಣಾಗಾರದ ಮೇಲೆ ಉಕ್ರೇನ್ ದಾಳಿ

Photo Credit : AP
ಮಾಸ್ಕೊ, ಜೂ.18: ಉಕ್ರೇನ್ ಗುರುವಾರ ಮಾಸ್ಕೋದ ತೈಲ ಸಂಸ್ಕರಣಾಗಾರವೊಂದರ ಮೇಲೆ ದಾಳಿ ನಡೆಸಿದ್ದು ದಾಳಿಯಿಂದಾಗಿ ಆಕಾಶದಲ್ಲಿ ದಟ್ಟವಾದ ಕಪ್ಪು ಹೊಗೆ ಮತ್ತು ಬೆಂಕಿಯ ಜ್ವಾಲೆಗಳು ಎದ್ದಿವೆ.
ಇದು ತೈಲ ಸಂಸ್ಕರಣಾಗಾರದ ಮೇಲೆ ಈ ವಾರದಲ್ಲೇ ನಡೆದಿರುವ ಎರಡನೇ ದಾಳಿಯಾಗಿದೆ. ಮಾಸ್ಕೊದತ್ತ ಧಾವಿಸುತ್ತಿದ್ದ ಸುಮಾರು 200 ಡ್ರೋನ್ಗಳು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಉಕ್ರೇನ್ನ ಕನಿಷ್ಠ 555 ಡ್ರೋನ್ಗಳನ್ನು ಹೊಡೆದುರುಳಿಸಿರುವುದಾಗಿ ರಶ್ಯ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯ ಹಿನ್ನೆಲೆಯಲ್ಲಿ ರಶ್ಯದ ಸಾರಿಗೆ ಸಚಿವಾಲಯವು ಮಾಸ್ಕೊದ ಶೆರೆಮೆಟ್ಯೆವೊ, ಡೊಮೊಡೆಡೋವೊ, ವ್ನುಕೊವೊ ಮತ್ತು ಝುಕೋವ್ಸ್ಕಿ ವಿಮಾನ ನಿಲ್ದಾಣಗಳಲ್ಲಿ ವಿಮಾನ ಹಾರಾಟವನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಿದೆ.
ದಾಳಿಯನ್ನು ಸಮರ್ಥಿಸಿಕೊಂಡಿರುವ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ `ನಮ್ಮ ನಗರಗಳು ಮತ್ತು ಸಮುದಾಯಗಳ ಮೇಲಿನ ರಶ್ಯದ ದಾಳಿಗಳಿಗೆ ಇದು ಸಂಪೂರ್ಣವಾಗಿ ನ್ಯಾಯಸಮ್ಮತವಾದ ಪ್ರತಿಕ್ರಿಯೆಯಾಗಿದೆ. ರಷ್ಯಾದ ಯುದ್ಧ ಯಂತ್ರಕ್ಕೆ ಪೂರಕವಾಗಿರುವ ಸೌಲಭ್ಯಗಳ ವಿರುದ್ಧ ನಮ್ಮ ಯೋಧರು ನಡೆಸಿದ ಯಶಸ್ವಿ ಕಾರ್ಯಾಚರಣೆಯ ಮತ್ತೊಂದು ಪ್ರಮುಖ ಫಲಿತಾಂಶ ಇದಾಗಿದೆ' ಎಂದು ಹೇಳಿದ್ದಾರೆ.




