ಕದನ ವಿರಾಮ ನಡೆಯದಂತೆ ಪುಟಿನ್ ಅಡ್ಡಗಾಲು ಇಡುತ್ತಿದ್ದಾರೆ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಆರೋಪ

ವ್ಲಾದಿಮಿರ್ ಪುಟಿನ್ / ವೊಲೊದಿಮಿರ್ ಝೆಲೆನ್ಸ್ಕಿ (PTI)
ಕೀವ್, ಆ.10: ರಶ್ಯ-ಉಕ್ರೇನ್ ಕದನ ವಿರಾಮವನ್ನು ಅತ್ಯಧಿಕ ಬೆಲೆಗೆ ಮಾರಾಟ ಮಾಡಲು ರಶ್ಯ ಅಧ್ಯಕ್ಷ ಪುಟಿನ್ ಪ್ರಯತ್ನಿಸುತ್ತಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಶನಿವಾರ ಹೇಳಿದ್ದಾರೆ.
ಯುದ್ಧ ಅಂತ್ಯಗೊಳ್ಳುವುದಕ್ಕೆ ಮೊದಲ ಆದ್ಯತೆ ನೀಡಬೇಕು ಮತ್ತು ಯುದ್ಧ ನಿಲ್ಲುವುದು ರಶ್ಯವನ್ನು ಅವಲಂಬಿಸಿದೆ. ಯುದ್ಧವನ್ನು ಆರಂಭಿಸಿದ್ದೂ ಅವರೇ ಎಂದು ಝೆಲೆನ್ಸ್ಕಿ `ಎಕ್ಸ್'ನಲ್ಲಿ ಟ್ವೀಟ್ ಮಾಡಿದ್ದಾರೆ.
`ಕದನ ವಿರಾಮ ಮತ್ತು ಹಿಂಸಾಚಾರಕ್ಕೆ ಅಂತ್ಯಹೇಳಬೇಕು ಎಂಬುದು ಉಕ್ರೇನ್ ಮತ್ತದರ ಮಿತ್ರರಾಷ್ಟ್ರಗಳು ಸಾಮಾನ್ಯ ನಿಲುವಾಗಿದೆ. ಆದರೆ ಇದಕ್ಕೆ ಕೇವಲ ಒಬ್ಬ ವ್ಯಕ್ತಿ, ಪುಟಿನ್ ಅಡ್ಡಗಾಲು ಇಡುತ್ತಿದ್ದಾರೆ. ಕೊಲ್ಲುವ ಸಾಮರ್ಥ್ಯವೇ ಅವರ ಅವರ ಏಕೈಕ ಗುರುತುಚೀಟಿ ಆಗಿದೆ. ಹತ್ಯೆಗಳ ನಿಲುಗಡೆಯನ್ನು ಸಾಧ್ಯವಾದಷ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಲು ಅವರು ಪ್ರಯತ್ನಿಸುತ್ತಿದ್ದಾರೆ' ಎಂದು ಝೆಲೆನ್ಸ್ಕಿ ಪ್ರತಿಪಾದಿಸಿದ್ದು ಉಕ್ರೇನ್ ಆಕ್ರಮಣಕಾರರಿಗೆ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ. ಯುದ್ಧವನ್ನು ಕೊನೆಗೊಳಿಸುವಲ್ಲಿ ಅಮೆರಿಕದ ಪಾತ್ರದ ಬಗ್ಗೆ ಉಕ್ರೇನ್ ವಿಶ್ವಾಸ ಹೊಂದಿದೆ. ಯುದ್ಧ ಅಂತ್ಯಗೊಳಿಸಲು ಅಮೆರಿಕದ ಅಧ್ಯಕ್ಷರು ದೃಢನಿಶ್ಚಯವನ್ನು ಹೊಂದಿದ್ದಾರೆ' ಎಂದು ಝೆಲೆನ್ಸ್ಕಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.





