ಉಕ್ರೇನ್ ಯುದ್ಧ ಕೊನೆಗೊಳಿಸುವ ರಾಜತಾಂತ್ರಿಕ ಪರಿಹಾರ ಮಾರ್ಗಕ್ಕೆ ರಶ್ಯ, ಅಮೆರಿಕ ಹತ್ತಿರದಲ್ಲಿವೆ : ರಾಯಭಾರಿ ಕಿರಿಲ್ ಡಿಮಿಟ್ರಿಯೆವ್

Photo credit:REUTERS
ನ್ಯೂಯಾರ್ಕ್, ಅ.25: ಉಕ್ರೇನ್ನೊಂದಿಗಿನ ಯುದ್ಧವನ್ನು ಕೊನೆಗೊಳಿಸುವ ರಾಜತಾಂತ್ರಿಕ ಪರಿಹಾರ ಮಾರ್ಗಕ್ಕೆ ರಶ್ಯ, ಅಮೆರಿಕ ಹತ್ತಿರದಲ್ಲಿವೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ವಿಶೇಷ ರಾಯಭಾರಿ ಕಿರಿಲ್ ಡಿಮಿಟ್ರಿಯೆವ್ ಹೇಳಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದೊಂದಿಗೆ ಮಾತುಕತೆಗಾಗಿ ಕಿರಿಲ್ ಡಿಮಿಟ್ರಿಯೆವ್ ಶುಕ್ರವಾರ ವಾಷಿಂಗ್ಟನ್ಗೆ ಆಗಮಿಸಿದ್ದರು. ರಶ್ಯ ಅಧ್ಯಕ್ಷರ ವಿಶೇಷ ಆರ್ಥಿಕ ರಾಯಭಾರಿ ಕಿರಿಲ್ ಡಿಮಿಟ್ರಿಯೆವ್ `ಅಮೆರಿಕ-ರಶ್ಯ ಸಂಬಂಧಗಳ ಕುರಿತ ಮಾತುಕತೆಗಳನ್ನು ಮುಂದುವರಿಸಲು ಅಮೆರಿಕಾದ ನಿಯೋಗದ ಆಹ್ವಾನದ ಮೇರೆಗೆ ಅಮೆರಿಕಾಕ್ಕೆ ಭೇಟಿ ನೀಡಿರುವುದಾಗಿ' ಡಿಮಿಟ್ರಿಯೆವ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಉಕ್ರೇನ್ ಯುದ್ಧದ ಬಗ್ಗೆ ರಶ್ಯದ ನಿಲುವನ್ನು ಟ್ರಂಪ್ ಆಡಳಿತದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ತಿಳಿಸುತ್ತೇನೆ. ದುರದೃಷ್ಟವಶಾತ್ ಉಕ್ರೇನ್ ಶಾಂತಿ ಮಾತುಕತೆಯನ್ನು ಅಡ್ಡಿಪಡಿಸುತ್ತಿದೆ. ಬಿಕ್ಕಟ್ಟು ಮುಂದುವರಿಯಬೇಕೆಂದು ಬಯಸಿರುವ ಬ್ರಿಟನ್ ಮತ್ತು ಯುರೋಪಿಯನ್ ದೇಶಗಳು ಝೆಲೆನ್ಸ್ಕಿ ಮೇಲೆ ಒತ್ತಡ ಹೇರಿ ಮಾತುಕತೆಯನ್ನು ವಿಫಲಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಡಿಮಿಟ್ರಿಯೆವ್ರನ್ನು ಉಲ್ಲೇಖಿಸಿ `ತಾಸ್' ಸುದ್ದಿಸಂಸ್ಥೆ ವರದಿ ಮಾಡಿದೆ.





