ಇರಾನ್ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳದಂತೆ ಅಮೆರಿಕಗೆ ರಶ್ಯ ಎಚ್ಚರಿಕೆ

ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Photo credit: PTI)
ಮಾಸ್ಕೊ: ಇರಾನ್ ವಿರುದ್ಧ ಯಾವುದೇ ಮಿಲಿಟರಿ ಕ್ರಮ ಕೈಗೊಳ್ಳದಂತೆ ಅಮೆರಿಕಗೆ ರಶ್ಯ ಎಚ್ಚರಿಕೆಯನ್ನು ನೀಡಿದೆ ಎಂದು ವರದಿಯಾಗಿದೆ.
ಇರಾನ್- ಇಸ್ರೇಲ್ ಯುದ್ಧದಲ್ಲಿ ಅಮೆರಿಕದ ಹಸ್ತಕ್ಷೇಪದ ಬಗೆಗಿನ ಊಹಾಪೋಹಗಳ ನಡುವೆ ರಶ್ಯ ಎಚ್ಚರಿಕೆ ನೀಡಿದೆ.
ʼಈ ಸನ್ನಿವೇಶದಲ್ಲಿ ಮಿಲಿಟರಿ ಹಸ್ತಕ್ಷೇಪದ ಬಗ್ಗೆ ನಾವು ಅಮೆರಿಕಗೆ ಎಚ್ಚರಿಕೆ ನೀಡಲು ಬಯಸುತ್ತೇವೆʼ ಎಂದು ರಶ್ಯದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಝಖರೋವಾ ಹೇಳಿದ್ದಾರೆ.
ಕಳೆದ ವಾರ ಇಸ್ರೇಲ್ ಇರಾನ್ ಮೇಲೆ ವೈಮಾನಿಕ ದಾಳಿಯನ್ನು ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಕ್ಷಿಪಣಿ ಮತ್ತು ಡ್ರೋನ್ಗಳ ಮೂಲಕ ಪ್ರತಿದಾಳಿಯನ್ನು ನಡೆಸಿದೆ.
ರಶ್ಯ ಇರಾನ್ನ ಪ್ರಮುಖ ಮಿತ್ರರಾಷ್ಟ್ರಗಳಲ್ಲಿ ಒಂದಾಗಿದೆ. ಎರಡೂ ದೇಶಗಳು ಮಿಲಿಟರಿ ಸಹಕಾರವನ್ನು ಹೊಂದಿದೆ. ಕೆಲವೇ ತಿಂಗಳುಗಳ ಹಿಂದೆ ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಿವೆ.
ಇಸ್ರೇಲ್ ಮೇಲೆ ವಾಯು ದಾಳಿಯ ವೇಳೆ ರಶ್ಯ ಈವರೆಗೆ ಇರಾನ್ಗೆ ಮಿಲಿಟರಿ ಬೆಂಬಲವನ್ನು ನೀಡಿಲ್ಲ. ಆದರೆ, ಇರಾನ್, ಇಸ್ರೇಲ್ ಹಾಗೂ ಅಮೆರಿಕ ನಡುವೆ ಉದ್ಭವಿಸಿರುವ ಬಿಕ್ಕಟಿನ ಮಧ್ಯಸ್ಥಿಕೆ ವಹಿಸಲು ರಶ್ಯ ಸಿದ್ಧ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದರು.





