ರಶ್ಯಕ್ಕೆ ನಿರಂತರ ಬೆಂಬಲ: ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್

ಕ್ಸಿಜಿಂಪಿಂಗ್ | Photo: PTI
ಬೀಜಿಂಗ್: ರಶ್ಯ ಮತ್ತು ಚೀನಾದ ನಡುವಿನ ಸಹಭಾಗಿತ್ವಕ್ಕೆ ಯಾವುದೇ ಮಿತಿಗಳಿಲ್ಲ ಮತ್ತು ರಶ್ಯಕ್ಕೆ ಚೀನಾದ ಬೆಂಬಲ ನಿರಂತರವಾಗಿ ಮುಂದುವರಿಯಲಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಸೋಮವಾರ ದೃಢಪಡಿಸಿದ್ದಾರೆ.
ಉಕ್ರೇನ್ ಯುದ್ಧದ ಮೂರನೇ ವಾರ್ಷಿಕ ದಿನದ ಸಂದರ್ಭ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ಗೆ ದೂರವಾಣಿ ಕರೆ ಮಾಡಿದ ಜಿಂಪಿಂಗ್ `ಚೀನಾ-ರಶ್ಯ ಸಂಬಂಧಗಳು ಬಲವಾದ ಆಂತರಿಕ ಪ್ರೇರಕ ಶಕ್ತಿ ಮತ್ತು ಅನನ್ಯ ಕಾರ್ಯತಂತ್ರದ ಮೌಲ್ಯಗಳನ್ನು ಹೊಂದಿದೆ ಮತ್ತು ಯಾವುದೇ ಮೂರನೇ ವ್ಯಕ್ತಿ ಅದರ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ' ಎಂದು ಹೇಳಿದರು. ಉಕ್ರೇನ್ ಕದನ ವಿರಾಮ ಒಪ್ಪಂದ ಮಾತುಕತೆಯ ನೆಪದಲ್ಲಿ ರಶ್ಯದ ಜತೆ ಸಂವಹನ ನಡೆಸುತ್ತಾ ಚೀನಾ ಮತ್ತು ರಶ್ಯದ ನಡುವೆ ಕಂದಕ ಸೃಷ್ಟಿಸಲು ಅಮೆರಿಕ ಪ್ರಯತ್ನಿಸುತ್ತಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಜಿಂಪಿಂಗ್ ಅವರ ಹೇಳಿಕೆ ಮಹತ್ವ ಪಡೆದಿದೆ.
ಚೀನಾ ಮತ್ತು ರಶ್ಯದ ಅಭಿವೃದ್ಧಿ ಕಾರ್ಯತಂತ್ರಗಳು ಮತ್ತು ವಿದೇಶಿ ನೀತಿಗಳು ದೀರ್ಘಕಾಲೀನವಾಗಿವೆ. ಉಭಯ ದೇಶಗಳು ಉತ್ತಮ ನೆರೆಹೊರೆಯವರಾಗಿದ್ದು ಅದನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಜಿಂಪಿಂಗ್ ಹೇಳಿರುವುದಾಗಿ ವರದಿಯಾಗಿದೆ.





