ಉಕ್ರೇನ್ ಸಹಾಯ ವಿತರಣಾ ಕೇಂದ್ರದ ಮೇಲೆ ರಶ್ಯ ದಾಳಿ: 29 ಮಂದಿ ಮೃತ್ಯು

Photo Credit : BBC
ಕೀವ್: ದಕ್ಷಿಣ ಉಕ್ರೇನ್ನ ಝಪೋರಿಝಿಯಾ ಪ್ರದೇಶದ ಕೊಮ್ಯುಶುವಾಖಾ ಗ್ರಾಮದಲ್ಲಿ ಮಾನವೀಯ ನೆರವು ಪಡೆಯಲು ಜನರು ಸೇರಿದ್ದ ಶಾಲಾ ಕಟ್ಟಡದ ಮೇಲೆ ಸೋಮವಾರ ರಾತ್ರಿ ರಶ್ಯ ನಡೆಸಿದ ದಾಳಿಯಲ್ಲಿ ಕನಿಷ್ಠ 29 ಮಂದಿ ಮೃತಪಟ್ಟಿದ್ದು, ಇನ್ನೂ 48 ಜನರು ನಾಪತ್ತೆಯಾಗಿದ್ದಾರೆ. ಸರಣಿ ದಾಳಿಗಳು ದೇಶಾದ್ಯಂತ ವಿದ್ಯುತ್ ಸ್ಥಾವರಗಳು , ಆಸ್ಪತ್ರೆಗಳಿಗೆ ಹಾನಿ ಮಾಡಿದ್ದಲ್ಲದೆ ವ್ಯಾಪಕ ನಾಶ-ನಷ್ಟ ಸಂಭವಿಸಿದೆ.
ರಶ್ಯ 289 ಡ್ರೋನ್ಗಳು, 17 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 59 ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಿದ್ದು, ಹಲವೆಡೆ ವಿದ್ಯುತ್ ಕಡಿತಕ್ಕೆ ಕಾರಣವಾಗಿದೆ. ಮೃತರಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳು ಮತ್ತು ಇಬ್ಬರು ರಕ್ಷಣಾ ಸಿಬ್ಬಂದಿ ಸೇರಿದ್ದಾರೆ. ಕನಿಷ್ಠ ಐದು ಜನರು ಗಾಯಗೊಂಡಿದ್ದಾರೆ.
ಈಶಾನ್ಯ ಪ್ರದೇಶದ ಖಾರ್ಕಿವ್ನಲ್ಲಿ ರಶ್ಯದ ಕ್ಷಿಪಣಿ ಮತ್ತು ಡ್ರೋನ್ ಜಂಟಿ ದಾಳಿಯಲ್ಲಿ ಕನಿಷ್ಠ 62 ಜನರು ಗಾಯಗೊಂಡಿದ್ದಾರೆ. ಈ ದಾಳಿಯು ನೆಮಿಶ್ಲಿಯಾನ್ಸ್ಕಿ ಜಿಲ್ಲೆಯ ವೈದ್ಯಕೀಯ ಸೌಲಭ್ಯಕ್ಕೆ ಹಾನಿ ಮಾಡಿದ್ದು 200ಕ್ಕೂ ಹೆಚ್ಚು ರೋಗಿಗಳನ್ನು ಇತರ ವೈದ್ಯಕೀಯ ಸೌಲಭ್ಯಗಳಿಗೆ ಸ್ಥಳಾಂತರಿಸಲಾಗಿದೆ. ಡ್ನಿಪ್ರೊ ಪ್ರದೇಶದಲ್ಲಿ, ಒಬ್ಬರು ಮೃತಪಟ್ಟು, 17 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ, ಸೋಮವಾರ ರಾತ್ರಿಯಿಂದ 856 ಉಕ್ರೇನಿಯನ್ ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ. ಯಾರೋಸ್ಲಾವ್ಲ್ ನಗರದ ತೈಲ ಶುದ್ಧೀಕರಣ ಘಟಕದ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಇಬ್ಬರು ನೌಕರರು ಗಾಯಗೊಂಡಿದ್ದು ಸಂಸ್ಕರಣಾಗಾರದ ಮೂಲಸೌಕರ್ಯಕ್ಕೆ ಹಾನಿಯಾಗಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಮಂಗಳವಾರ ತಿಳಿಸಿದೆ.






