ರೊಮೇನಿಯಾದಲ್ಲಿ ರಷ್ಯನ್ ಡ್ರೋನ್ ಪತನ; ವಸತಿ ಕಟ್ಟಡಕ್ಕೆ ಹಾನಿ, ಇಬ್ಬರಿಗೆ ಗಾಯ

Photo Credit ; X
ಕೀವ್, ಮೇ 29: ಉಕ್ರೇನ್ ಮೇಲೆ ರಷ್ಯಾ ಶುಕ್ರವಾರ ತಡರಾತ್ರಿ ನಡೆಸಿದ ದಾಳಿಯ ಭಾಗವಾಗಿದ್ದ ಡ್ರೋನ್ ಒಂದು ಪೂರ್ವ ರೊಮೇನಿಯಾದ ವಸತಿ ಕಟ್ಟಡವೊಂದರ ಮೇಲೆ ಪತನಗೊಂಡು, ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ.
ಗಲಾಟಿ ನಗರದಲ್ಲಿ ನಡೆದ ಡ್ರೋನ್ ಪತನದ ಘಟನೆಯ ಹಿನ್ನೆಲೆಯಲ್ಲಿ, ಡ್ರೋನ್ ನಿರೋಧಕ ಸಾಮರ್ಥ್ಯಗಳನ್ನು ತನ್ನ ಸೇನೆಗೆ ಒದಗಿಸಬೇಕೆಂದು ನ್ಯಾಟೊ ಸೇನಾ ಮೈತ್ರಿಕೂಟದ ಸದಸ್ಯ ರಾಷ್ಟ್ರವಾದ ರೊಮೇನಿಯಾ ಮಿತ್ರ ರಾಷ್ಟ್ರಗಳನ್ನು ಕೋರಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ಮಧ್ಯೆ ರೊಮೇನಿಯಾದ ಸಶಸ್ತ್ರ ಪಡೆಗಳ ಜಂಟಿ ಕಾರ್ಯನಿರ್ವಹಣಾ ಕಮಾಂಡರ್ ಜನರಲ್ ಗಿಯೊರ್ಗೆ ಮ್ಯಾಕ್ಸಿಮ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ದಾಳಿಯು ರೊಮೇನಿಯಾ ವಿರುದ್ಧ ನಡೆಸಿದ ದಾಳಿಯಲ್ಲ. ಆದರೆ ರಷ್ಯಾ ಈ ಪ್ರದೇಶದಲ್ಲಿರುವ ದೇಶಗಳ ಭದ್ರತೆಗೆ ಬೆದರಿಕೆಯಾಗಿದೆ ಎಂಬುದನ್ನು ರೊಮೇನಿಯನ್ನರು ಅರಿತುಕೊಳ್ಳಬೇಕು ಎಂದು ಹೇಳಿದ್ದಾರೆ.
ಡ್ಯಾನ್ಯೂಬ್ ನದಿಯ ದಡದಲ್ಲಿರುವ ಗಲಾಟಿ ನಗರವು ಉಕ್ರೇನ್ ಹಾಗೂ ಮೊಲ್ಡೊವಾ ರಾಷ್ಟ್ರಗಳ ಗಡಿಯ ಸಮೀಪದಲ್ಲಿದೆ.
ಉಕ್ರೇನ್ ಪಡೆಗಳು ಶುಕ್ರವಾರ ತಡರಾತ್ರಿ 217 ಡ್ರೋನ್ಗಳನ್ನು ಹೊಡೆದುರುಳಿಸಿವೆ. ಒಟ್ಟಾರೆ ರಷ್ಯಾ 232 ಡ್ರೋನ್ಗಳು ಹಾಗೂ ಒಂದು ಬ್ಯಾಲಿಸ್ಟಿಕ್ ಕ್ಷಿಪಣಿಯೊಂದಿಗೆ ದಾಳಿ ನಡೆಸಿದ್ದು, 14 ಸ್ಥಳಗಳಲ್ಲಿ ಆಕ್ರಮಣ ನಡೆದಿದೆ ಎಂದು ಉಕ್ರೇನ್ ವಾಯುಪಡೆ ತಿಳಿಸಿದೆ.
NATO ಖಂಡನೆ
ಉಕ್ರೇನ್ ಗಡಿ ರಾಷ್ಟ್ರವಾದ ರೊಮೇನಿಯಾದಲ್ಲಿ ರಷ್ಯಾದ ಡ್ರೋನ್ ಪತನಗೊಂಡು ಇಬ್ಬರು ಗಾಯಗೊಂಡ ಘಟನೆಯನ್ನು NATO ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಖಂಡಿಸಿದ್ದಾರೆ. NATO ಸೇನಾ ಮೈತ್ರಿಕೂಟವು ರೊಮೇನಿಯಾದೊಂದಿಗೆ ಸಂಪೂರ್ಣ ಏಕತೆಯನ್ನು ಘೋಷಿಸಿದೆ ಎಂದೂ ತಿಳಿಸಿದ್ದಾರೆ.
ರೊಮೇನಿಯಾದ ಅಧ್ಯಕ್ಷರಿಗೆ ದೂರವಾಣಿ ಕರೆ ಮಾಡಿರುವ ರುಟ್ಟೆ, ‘‘NATO ಮಿತ್ರ ರಾಷ್ಟ್ರದ ಯಾವುದೇ ಪ್ರಾಂತ್ಯದ ಇಂಚಿಂಚೂ ಜಾಗವನ್ನು ರಕ್ಷಿಸಲು ನ್ಯಾಟೊ ಸನ್ನದ್ಧವಾಗಿದೆ ಎಂಬುದನ್ನು ನಾನು ದೃಢಪಡಿಸುತ್ತೇನೆ’’ ಎಂದು ಹೇಳಿದ್ದಾರೆ.
ಡ್ರೋನ್ಗಳು ಸೇರಿದಂತೆ ಯಾವುದೇ ದಾಳಿಯನ್ನು ಹಿಮ್ಮೆಟ್ಟಿಸಲು ಹಾಗೂ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಮ್ಮ ಸನ್ನದ್ಧತೆಯನ್ನು ಮತ್ತಷ್ಟು ವೃದ್ಧಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ರಷ್ಯಾ ಉಕ್ರೇನ್ನಾದ್ಯಂತ ನಾಗರಿಕರು ಹಾಗೂ ಪೌರ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಕಳೆದ ರಾತ್ರಿ ನಡೆದ ದಾಳಿಯು ರಷ್ಯಾದ ಈ ಕಾನೂನುಬಾಹಿರ ಯುದ್ಧಾಕ್ರಮಣವು ಕೇವಲ ಗಡಿಗೆ ಸೀಮಿತವಾಗಿಲ್ಲ ಎಂಬುದನ್ನು ತೋರಿಸಿದೆ ಎಂದು ಅವರು ಹೇಳಿದ್ದಾರೆ.






