ಉಕ್ರೇನ್ನ ಡ್ರೋನ್ ದಾಳಿ ತಾಳಲಾಗದೆ ವಾಯುರಕ್ಷಣಾ ವ್ಯವಸ್ಥೆಯನ್ನು ಮಾಸ್ಕೊಗೆ ಸ್ಥಳಾಂತರಿಸಿದ ರಶ್ಯ ಸೇನೆ : ವರದಿ

Photo Credit : AP , PTI
ಕೀವ್,ಜೂ.25: ರಶ್ಯವು ತನ್ನ ವಾಯುರಕ್ಷಣಾ ವ್ಯವಸ್ಥೆಯ ಗಣನೀಯ ಭಾಗವನ್ನು ಮಾಸ್ಕೋ ಸೇರಿದಂತೆ ದೇಶದಲ್ಲಿರುವ ಕೈಬೆರಳೆಣಿಕೆಯ ಪ್ರಮುಖ ಮಿಲಿಟರಿ ನೆಲೆಗಳ ರಕ್ಷಣೆಗಾಗಿ ನಿಯೋಜಿಸಿದೆ. ಉಕ್ರೇನ್ ದೀರ್ಘವ್ಯಾಪ್ತಿಯ ಡ್ರೋನ್ಗಳು, ರಶ್ಯದ ತೀರಾ ಒಳಭಾಗಕ್ಕೆ ನುಗ್ಗಿ ಸತತವಾಗಿ ಆಕ್ರಮಣಗಳನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ ಮಾಸ್ಕೋ ಈ ಕ್ರಮವನ್ನು ಕೈಗೊಂಡಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಬಹಿರಂಗಪಡಿಸಿದ್ದಾರೆ.
ಉಕ್ರೇನ್ , ಇತ್ತೀಚಿನ ತಿಂಗಳುಗಳಲ್ಲಿ ರಶ್ಯದ ಸೇನಾ ಸ್ಥಾಪನೆಗಳ ಹಾಗೂ ಇಂಧನ ಸೌಲಭ್ಯಗಳ ಮೇಲೆ ವೈಮಾನಿಕ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಉಕ್ರೇನ್ ಈ ಯಶಸ್ವಿ ಕಾರ್ಯಾಚರಣೆಯಿಂದಾಗಿ ರಶ್ಯನ್ ಸೇನೆಯು ತೈಲದ ಕೊರತೆಯನ್ನು ಎದುರಿಸುತ್ತಿದ್ದು, ಅದರ ಸೇನಾ ಪೂರೈಕೆ ಮಾರ್ಗಗಳಿಗೆ ಅಡಚಣೆಯುಂಟಾಗಿದೆ. ಉಕ್ರೇನ್ ಜೊತೆಗೆ ಸುಮಾರು ನಾಲ್ಕು ವರ್ಷಗಳಿಗೂ ಅಧಿಕ ಸಮಯದಿಂದ ಯುದ್ಧನಿರತವಾಗಿರುವ ರಶ್ಯವು ಇದೇ ಮೊದಲ ಬಾರಿಗೆ ಉಕ್ರೇನ್ ಮೇಲಿನ ದಾಳಿಯನ್ನು ಸ್ಥಗಿತಗೊಳಿಸಿದೆ.
ರಶ್ಯವು ತನ್ನ ವಾಯುರಕ್ಷಣಾ ವ್ಯವಸ್ಥೆಗಳನ್ನು ರಾಜಧಾನಿ ಮಾಸ್ಕೊ ಹಾಗೂ ರಶ್ಯನ್ ಅಧ್ಯಕ್ಷ ಪುಟಿನ್ ಅವರ ನಿವಾಸವಿರುವ ವಾಲ್ಡಾಯ್ ನಗರವನ್ನು ಮತ್ತು ರಶ್ಯದ ಮುಖ್ಯಭೂಮಿ ಹಾಗೂ ಕ್ರಿಮಿಯನ್ ಪರ್ಯಾಯದ್ವೀಪವನ್ನು ಸಂಪರ್ಕಿಸುವ ಪ್ರಮುಖ ಪೂರೈಕೆ ಮಾರ್ಗವಾದ ಕೆರ್ಚ್ ಸೇತುವೆಯ ರಕ್ಷಣೆಗಾಗಿ ನಿಯೋಜಿಸಿದೆ ಎಂದು ಝೆಲೆನ್ಸ್ಕಿ ಅವರು ಬುಧವಾರ ಪ್ರಸಾರ ಮಾಡಿದ ತನ್ನ ದೈನಂದಿನ ವೀಡಿಯೊ ಭಾಷಣದಲ್ಲಿ ತಿಳಿಸಿದ್ದಾರೆ.




