ಉಕ್ರೇನ್ ನ ಜೈಲಿನ ಮೇಲೆ ರಶ್ಯದ ಕ್ಷಿಪಣಿ ದಾಳಿ: 17 ಕೈದಿಗಳ ಮೃತ್ಯು

Photo | Reuters
ಕೀವ್, ಜು.29: ಆಗ್ನೇಯ ಉಕ್ರೇನ್ ನ ಝಪೋರಿಜಿಯಾ ಪ್ರಾಂತದಲ್ಲಿನ ಜೈಲಿನ ಮೇಲೆ ರಶ್ಯ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 17 ಕೈದಿಗಳು ಸಾವನ್ನಪ್ಪಿದ್ದು 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಉಕ್ರೇನ್ ನ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
42 ಕೈದಿಗಳು ಗಂಭೀರ ಗಾಯಗೊಂಡಿದ್ದರೆ ಜೈಲಿನ ಸಿಬ್ಬಂದಿ ಸೇರಿದಂತೆ ಇತರ 40 ಮಂದಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಬಿಲೆಂಕಿವಸ್ಕ ಪ್ರದೇಶದ ಮೇಲೆ ರಶ್ಯ ನಾಲ್ಕು ಬಾಂಬ್ ಗಳನ್ನು ಹಾಕಿದ್ದು ಜೈಲಿಗೆ ವ್ಯಾಪಕ ಹಾನಿ ಸಂಭವಿಸಿದೆ. ಜೈಲಿನ ಊಟದ ಹಾಲ್ ಸಂಪೂರ್ಣ ಹಾನಿಗೊಂಡಿದ್ದು ಆಡಳಿತಾತ್ಮಕ ಮತ್ತು ಸಂಪರ್ಕ ತಡೆ(ಕ್ವಾರಂಟೈನ್) ಕಟ್ಟಡಗಳಿಗೂ ಹಾನಿಯಾಗಿದೆ. ಆದರೆ ಜೈಲಿನ ಕೋಣೆಗಳಿಗೆ ಹಾನಿ ಸಂಭವಿಸಿಲ್ಲ ಮತ್ತು ಯಾವುದೇ ಕೈದಿ ಪರಾರಿಯಾಗಿಲ್ಲ ಎಂದು ಉಕ್ರೇನ್ ನ ಅಧಿಕಾರಿಗಳು ದೃಢಪಡಿಸಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ, ಸೇನಾ ಮುಖ್ಯಸ್ಥ ಆಂಡ್ರಿಯ್ ಯೆರ್ಮಾಕ್ ದಾಳಿಯನ್ನು ಖಂಡಿಸಿದ್ದು ಜೈಲಿನಂತಹ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುವುದು ಅಂತರಾಷ್ಟ್ರೀಯ ನಿರ್ಣಯದಡಿ ಯುದ್ಧಾಪರಾಧವಾಗಿದೆ ಎಂದು ಹೇಳಿದ್ದಾರೆ.





