ಉಕ್ರೇನ್ ಮೇಲೆ ಡ್ರೋನ್, ಕ್ಷಿಪಣಿ ಮಳೆಗರೆದ ರಶ್ಯ: 8 ಮಂದಿಗೆ ಗಾಯ

Photo : Meta AI
ಕೀವ್: ಉಕ್ರೇನ್ ನಾದ್ಯಂತ ಶನಿವಾರ ತಡರಾತ್ರಿಯಿಂದ ರಶ್ಯ ಭಾರೀ ಪ್ರಮಾಣದಲ್ಲಿ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದ್ದು ನಿರ್ಣಾಯಕ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿ ಸಂಭವಿಸಿರುವುದಾಗಿ ವರದಿಯಾಗಿದೆ.
ಉಕ್ರೇನ್ ನ ಸಶಸ್ತ್ರ ಪಡೆಗಳ ದಿನಾಚರಣೆ ಮತ್ತು ಯುದ್ಧ ಕೊನೆಗೊಳಿಸುವ ಬಗ್ಗೆ ವಿದೇಶದಲ್ಲಿ ಮಾತುಕತೆ ಮುಂದುವರಿಯುತ್ತಿರುವ ಸಂದರ್ಭದಲ್ಲೇ ರಶ್ಯದ ದಾಳಿ ನಡೆದಿದೆ. ರಶ್ಯವು 51 ಕ್ಷಿಪಣಿ ಮತ್ತು 653 ಡ್ರೋನ್ ಗಳನ್ನು ಪ್ರಯೋಗಿಸಿದ್ದು ಇದರಲ್ಲಿ 30 ಕ್ಷಿಪಣಿಗಳು ಹಾಗೂ 585 ಡ್ರೋನ್ ಗಳನ್ನು ತನ್ನ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ . ದೇಶದಾದ್ಯಂತ 29 ಸ್ಥಳಗಳಲ್ಲಿ ವ್ಯಾಪಕ ನಾಶ-ನಷ್ಟ ಸಂಭವಿಸಿದ್ದು ಕನಿಷ್ಠ 8 ಮಂದಿ ಗಾಯಗೊಂಡಿದ್ದಾರೆ. ಪತನಗೊಂಡ ಕ್ಷಿಪಣಿಗಳ ಅವಶೇಷ ಬಡಿದು ಹಲವು ವಸತಿ ಪ್ರದೇಶಗಳಿಗೆ ಹಾನಿಯಾಗಿದೆ. ಕೀವ್ ಬಳಿಯ ಫಾಸ್ತಿವ್ ನಗರದಲ್ಲಿ ಡ್ರೋನ್ ದಾಳಿಯಿಂದ ರೈಲ್ವೇ ನಿಲ್ದಾಣಕ್ಕೆ ಹಾಮಿಯಾಗಿದ್ದು ಈ ಪ್ರದೇಶದ ರೈಲು ಸಂಚಾರಕ್ಕೆ ತೊಡಕಾಗಿದೆ ಎಂದು ಉಕ್ರೇನಿನ ಆಂತರಿಕ ಸಚಿವ ಇಹೊರ್ ಕ್ಲಿಮೆಂಕೋ ಹೇಳಿದ್ದಾರೆ.
ಡ್ರೋನ್ ದಾಳಿಯ ಬಳಿಕ ಝಪೋರಿಝಿಯಾ ಪರಮಾಣು ಸ್ಥಾವರದ ಹೊರಗೆ ವಿದ್ಯುತ್ ಸಂಪರ್ಕ ತಾತ್ಕಾಲಿಕವಾಗಿ ಕಡಿತಗೊಂಡಿದೆ. ನಂತರ ರಿಯಾಕ್ಟರ್ ಗಳನ್ನು ಸ್ಥಗಿತಗೊಳಿಸಿದ್ದು ಪರಮಾಣು ಅಪಾಯವನ್ನು ದೂರಗೊಳಿಸಲು ನಿರಂತರ ವಿದ್ಯುತ್ ಸಂಪರ್ಕದ ಅಗತ್ಯವಿದೆ ಎಂದು ರಾಷ್ಟ್ರೀಯ ಇಂಧನ ನಿರ್ವಾಹಕ ಏಜೆನ್ಸಿಯ ಮೂಲಗಳು ಹೇಳಿವೆ.





