ಕ್ರಿಮಿಯಾದಲ್ಲಿ ರಶ್ಯ ನೌಕಾಪಡೆಯ ಹಡಗು ನಾಶ: ಉಕ್ರೇನ್ ಪ್ರತಿಪಾದನೆ

ಸಾಂದರ್ಭಿಕ ಚಿತ್ರ | Photo: NDTV
ಕೀವ್: ಕ್ರಿಮಿಯಾದ ಫಿಯೊಡೊಸಿಯಾ ಬಂದರಿನ ಬಳಿ ಲಂಗರು ಹಾಕಿದ್ದ ರಶ್ಯ ನೌಕಾಪಡೆಯ ಪ್ರಮುಖ ಹಡಗನ್ನು ನಾಶಪಡಿಸಿರುವುದಾಗಿ ಉಕ್ರೇನ್ ವಾಯುಪಡೆ ಮಂಗಳವಾರ ಹೇಳಿದೆ.
ಫಿಯೊಡೊಸಿಯಾ ಬಂದರಿನ ಮೇಲೆ ಮಂಗಳವಾರ ಬೆಳಿಗ್ಗೆ 2:30ಕ್ಕೆ ತನ್ನ ವಾಯುಪಡೆ ಕ್ಷಿಪಣಿ ದಾಳಿ ನಡೆಸಿದ್ದು ಬಂದರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲದೆ ಇಲ್ಲಿ ರಶ್ಯ ನಿಯೋಜಿಸಿದ್ದ ಕಪ್ಪು ಸಮುದ್ರ ತುಕಡಿಯ ಪ್ರಮುಖ ನೌಕೆ `ನೊವೊಷೆರ್ಕಾಸ್ಕ್' ಅನ್ನು ನಾಶಗೊಳಿಸಿದೆ ಎಂದು ಉಕ್ರೇನ್ ಸೇನೆ ಪ್ರತಿಪಾದಿಸಿದೆ. `ನಮ್ಮ ಪೈಲಟ್ ಗಳ ಅಮೋಘ ಕಾರ್ಯದಿಂದ ಕ್ರಿಮಿಯಾದಲ್ಲಿ ರಶ್ಯದ ತುಕಡಿ ದಿನೇ ದಿನೇ ಕಿರಿದಾಗುತ್ತಿದೆ' ಎಂದು ಉಕ್ರೇನ್ ವಾಯುಪಡೆಯ ಕಮಾಂಡರ್ ಮಿಕೊಲಾ ಒಲೆಷುಕ್ ಪ್ರತಿಕ್ರಿಯಿಸಿದ್ದಾರೆ.
ಉಕ್ರೇನ್ ದಾಳಿಯಿಂದಾಗಿ ಕ್ರಿಮಿಯಾದ ಬಂದರು ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದನ್ನು ತಕ್ಷಣ ನಿಯಂತ್ರಿಸಲಾಗಿದೆ. ತುರ್ತು ಸೇವಾ ವ್ಯವಸ್ಥೆಗಳನ್ನು ಸ್ಥಳಕ್ಕೆ ರವಾನಿಸಲಾಗಿದ್ದು ಹಲವು ಮನೆಗಳ ನಿವಾಸಿಗಳನ್ನು ತೆರವುಗೊಳಿಸಲಾಗಿದೆ. ಫಿಯೊಡೊಸಿಯಾಕ್ಕೆ ರೈಲು ಸೇವೆಗಳನ್ನು ತಾಂತ್ರಿಕ ಕಾರಣಗಳಿಂದ ರದ್ದುಗೊಳಿಸಲಾಗಿದ್ದು ರಸ್ತೆ ಸಂಚಾರವೂ ಭಾಗಶಃ ಮೊಟಕುಗೊಂಡಿದೆ ಎಂದು ಕ್ರಿಮಿಯಾದಲ್ಲಿ ರಶ್ಯ ನೇಮಿಸಿರುವ ಗವರ್ನರ್ ಸೆರ್ಗೆಯ್ ಅಕ್ಸಿಯೊನೊವ್ ಹೇಳಿದ್ದಾರೆ. ಉಕ್ರೇನಿನ ಭಾಗವಾಗಿದ್ದ ಕ್ರಿಮಿಯಾವನ್ನು 2014ರಲ್ಲಿ ರಶ್ಯ ಸ್ವಾಧೀನಪಡಿಸಿಕೊಂಡಿದ್ದು ಅಲ್ಲಿ ತನ್ನ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಿದೆ. ಆದರೆ ಇದನ್ನು ಅಂತರಾಷ್ಟ್ರೀಯ ಸಮುದಾಯ ಮಾನ್ಯ ಮಾಡಿಲ್ಲ.







