ರಶ್ಯದ ತೈಲದ ಮೇಲಿನ ನಿರ್ಬಂಧ ತಾತ್ಕಾಲಿಕ ತೆರವು, ಎಪ್ರಿಲ್ 11ರವರೆಗೆ ಅನ್ವಯ: ಅಮೆರಿಕ ಘೋಷಣೆ

ಸಾಂದರ್ಭಿಕ ಚಿತ್ರ | Photo Credit : AP , PTI
ವಾಶಿಂಗ್ಟನ್, ಮಾ.13: ಇಂಧನ ಬೆಲೆಗಳು ತೀವ್ರವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ರಶ್ಯದ ತೈಲ ಮಾರಾಟದ ಮೇಲಿನ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಲು ಅಮೆರಿಕ ಸರ್ಕಾರ ನಿರ್ಧರಿಸಿದೆ.
ಇರಾನ್ನೊಂದಿಗಿನ ಇಸ್ರೇಲ್–ಅಮೆರಿಕ ಯುದ್ಧದ ಆರ್ಥಿಕ ಪರಿಣಾಮಗಳನ್ನು ನಿಗ್ರಹಿಸಲು ರಶ್ಯದ ತೈಲ ಖರೀದಿಸಲು ಇತರ ದೇಶಗಳಿಗೆ ಅವಕಾಶ ಮಾಡಿಕೊಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ತಾತ್ಕಾಲಿಕ ನಿರ್ಬಂಧ ತೆರವು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಅಲ್ಪಾವಧಿಯ ಕ್ರಮವು ರಶ್ಯ ಸರ್ಕಾರಕ್ಕೆ ಗಮನಾರ್ಹ ಆರ್ಥಿಕ ಲಾಭವನ್ನು ಒದಗಿಸುವುದಿಲ್ಲ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ.
ತಾತ್ಕಾಲಿಕ ನಿರ್ಬಂಧ ಮನ್ನಾ ಎಪ್ರಿಲ್ 11ರವರೆಗೆ ಜಾರಿಯಲ್ಲಿರುತ್ತದೆ ಮತ್ತು ಕೇವಲ ‘ಪರ್ಮಿಟ್ ದೇಶಗಳಿಗೆ’ ಮಾತ್ರ ಅನ್ವಯಿಸುತ್ತದೆ. ತೈಲ ಬೆಲೆಯಲ್ಲಿನ ತಾತ್ಕಾಲಿಕ ಹೆಚ್ಚಳವು ಅಲ್ಪಾವಧಿಯ ಮತ್ತು ತಾತ್ಕಾಲಿಕ ಅಡ್ಡಿಯಾಗಿದ್ದು, ಇದು ದೀರ್ಘಾವಧಿಯಲ್ಲಿ ನಮ್ಮ ದೇಶ ಮತ್ತು ಆರ್ಥಿಕತೆಗೆ ಭಾರೀ ಲಾಭವನ್ನು ಉಂಟುಮಾಡುತ್ತದೆ ಎಂದು ಬೆಸೆಂಟ್ ಹೇಳಿದ್ದಾರೆ. ಸುಮಾರು 10 ಕೋಟಿ ಬ್ಯಾರೆಲ್ಗಳಷ್ಟು ತೈಲ ಪ್ರಸ್ತುತ ಸಾಗಣೆಯಲ್ಲಿದೆ ಎಂದು ರಶ್ಯ ಹೇಳಿದೆ.
ಗಲ್ಫ್ ನಲ್ಲಿ ಹಡಗುಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿ ಹಾಗೂ ಹಾರ್ಮುಜ್ ಜಲಸಂಧಿಯ ಮುಚ್ಚುಗಡೆಯಿಂದ ಜಾಗತಿಕ ಇಂಧನ ಮಾರುಕಟ್ಟೆ ತತ್ತರಿಸಿದೆ. ತೈಲ ಬೆಲೆಗಳು ಮತ್ತೆ ಬ್ಯಾರೆಲ್ಗೆ 100 ಡಾಲರ್ ಗಡಿ ದಾಟಿವೆ. ಗಲ್ಫ್ನಲ್ಲಿ ಮತ್ತೆ ಮೂರು ಸರಕು ನೌಕೆಗಳ ಮೇಲೆ ದಾಳಿ ನಡೆದ ಬಳಿಕ ಷೇರು ಮಾರುಕಟ್ಟೆಗಳು ಕುಸಿದಿವೆ.
ಪ್ರಪಂಚದ ಸುಮಾರು ಐದನೇ ಒಂದು ಭಾಗದಷ್ಟು ತೈಲವು ಸಾಮಾನ್ಯವಾಗಿ ಹಾರ್ಮುಜ್ ಜಲಸಂಧಿ ಮೂಲಕ ಹಾದುಹೋಗುತ್ತದೆ. ಗಲ್ಫ್ನಲ್ಲಿ ಸಿಲುಕಿರುವ ತೈಲ ಟ್ಯಾಂಕರ್ಗಳು ಇರಾನ್ ಮತ್ತು ಒಮಾನ್ ನಡುವಿನ ಕಿರಿದಾದ ಜಲಸಂಧಿ (ಹಾರ್ಮುಜ್) ಮೂಲಕ ಹಾದುಹೋಗಲು ಸಾಧ್ಯವಾಗದಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ.
► ಅಮೆರಿಕದ ಕ್ರಮಕ್ಕೆ ಜರ್ಮನಿ, ಬ್ರಿಟನ್, ಫ್ರಾನ್ಸ್ ವಿರೋಧ
ರಶ್ಯದ ತೈಲದ ಮೇಲಿನ ನಿರ್ಬಂಧವನ್ನು ತಾತ್ಕಾಲಿಕವಾಗಿ ತೆರವುಗೊಳಿಸುವ ಟ್ರಂಪ್ ಕ್ರಮವು ‘ಪುಟಿನ್ ಅವರನ್ನು ಶ್ರೀಮಂತಗೊಳಿಸುವ ಮತ್ತು ಉಕ್ರೇನ್ ಯುದ್ಧವನ್ನು ವಿಸ್ತರಿಸುವ ಭಯಾನಕ ನಿರ್ಧಾರ’ವಾಗಿದೆ ಎಂದು ಜರ್ಮನಿ, ಫ್ರಾನ್ಸ್, ಬ್ರಿಟನ್, ಉಕ್ರೇನ್ ಮತ್ತಿತರ ದೇಶಗಳು ಟೀಕಿಸಿವೆ.
ನಿರ್ಬಂಧ ತೆರವುಗೊಳಿಸುವುದು ಉಕ್ರೇನಿಯನ್ನರ ಮೇಲೆ ಮಾರಕ ಪ್ರಹಾರವಾಗಿದೆ ಮತ್ತು ರಶ್ಯಕ್ಕೆ ಇನ್ನಷ್ಟು ಆಯುಧಗಳನ್ನು ಖರೀದಿಸಲು ಅವಕಾಶ ಮಾಡಿಕೊಡುತ್ತದೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಟೀಕಿಸಿದ್ದಾರೆ.
‘ಈಗ ನಿರ್ಬಂಧ ತೆರವುಗೊಳಿಸುವುದು ತಪ್ಪು ನಿರ್ಧಾರ’ ಎಂದು ಜರ್ಮನಿಯ ಛಾನ್ಸಲರ್ ಫ್ರೆಡ್ರಿಕ್ ಮೆರ್ಝ್ ಹೇಳಿದ್ದಾರೆ. ರಶ್ಯದ ತೈಲದ ಮೇಲಿನ ನಿರ್ಬಂಧ ತೆರವುಗೊಳಿಸಿರುವ ಅಮೆರಿಕದ ಕ್ರಮವನ್ನು ಬ್ರಿಟನ್ ಅನುಸರಿಸುವುದಿಲ್ಲ ಎಂದು ಬ್ರಿಟನ್ನ ಇಂಧನ ಸಚಿವ ಮೈಕೆಲ್ ಶಾಂಕ್ಸ್ ಶುಕ್ರವಾರ ಹೇಳಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ಹಾರ್ಮುಜ್ ಜಲಸಂಧಿ ಮುಚ್ಚಿರುವುದು ರಶ್ಯದ ಮೇಲಿನ ನಿರ್ಬಂಧ ತೆರವುಗೊಳಿಸುವ ಕ್ರಮವನ್ನು ಸಮರ್ಥಿಸುವುದಿಲ್ಲ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಪ್ರತಿಕ್ರಿಯಿಸಿದ್ದಾರೆ.







