ರಶ್ಯದ ಪ್ರಮುಖ ತೈಲ ಸಂಸ್ಥೆಗಳಿಗೆ ಅಮೆರಿಕಾ ನಿರ್ಬಂಧ; ಕದನ ವಿರಾಮ ವಿಳಂಬಿಸುತ್ತಿರುವ ರಶ್ಯದ ವಿರುದ್ಧ ಒತ್ತಡ ತಂತ್ರ

ಡೊನಾಲ್ಡ್ ಟ್ರಂಪ್ , ವ್ಲಾದಿಮಿರ್ ಪುಟಿನ್ | Photo Credit : PTI
ವಾಷಿಂಗ್ಟನ್-ಬ್ರಸೆಲ್ಸ್: ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿ ರಶ್ಯದ ಎರಡು ಪ್ರಮುಖ ತೈಲ ಕಂಪನಿಗಳಾದ ಲುಕೋಯಿಲ್ ಮತ್ತು ರೊಸ್ನೆಫ್ಟ್ ವಿರುದ್ಧ ನಿರ್ಬಂಧ ಜಾರಿಗೊಳಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದಾರೆ.
ಉಕ್ರೇನ್ ಯುದ್ಧದ ವಿಷಯದಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ರೊಂದಿಗೆ ಹತಾಶೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತನ್ನ ಎರಡನೇ ಅಧಿಕಾರಾವಧಿಯಲ್ಲಿ ಪ್ರಥಮ ಬಾರಿಗೆ ಟ್ರಂಪ್ ರಶ್ಯದ ವಿರುದ್ಧ ನಿರ್ಬಂಧ ಜಾರಿಗೊಳಿಸಿದ್ದಾರೆ. ಕಳೆದ ವಾರ ರಶ್ಯದ ಈ ಎರಡು ಕಂಪನಿಗಳ ಮೇಲೆ ಬ್ರಿಟನ್ ನಿರ್ಬಂಧ ಜಾರಿಗೊಳಿಸಿತ್ತು.
ಇದರ ಜೊತೆಗೆ, ಹಂಗೇರಿಯ ಬುಡಾಪೆಸ್ಟ್ ನಲ್ಲಿ ರಶ್ಯ ಅಧ್ಯಕ್ಷ ಪುಟಿನ್ರೊಂದಿಗಿನ ಯೋಜಿತ ಶೃಂಗಸಭೆಗೆ ಇದು ಸಕಾಲವಲ್ಲ ಎಂದು ನಿರ್ಧರಿಸಿ ರದ್ದುಗೊಳಿಸಿರುವುದಾಗಿ ಟ್ರಂಪ್ ಘೋಷಿಸಿದ್ದಾರೆ.
ಈ ವಿವೇಕಶೂನ್ಯ ಯುದ್ಧವನ್ನು ಕೊನೆಗೊಳಿಸಲು ಅಧ್ಯಕ್ಷ ಪುಟಿನ್ ನಿರಾಕರಿಸಿದ ಕಾರಣ, ರಶ್ಯದ ಯುದ್ಧ ಯಂತ್ರಕ್ಕೆ ಧನಸಹಾಯ ನೀಡುವ ರಶ್ಯದ ಎರಡು ಪ್ರಮುಖ ತೈಲ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನಮ್ಮೊಂದಿಗೆ ಸೇರಲು ಮತ್ತು ಈ ನಿರ್ಬಂಧಗಳಿಗೆ ಬದ್ಧವಾಗಿರಲು ನಮ್ಮ ಮಿತ್ರರಾಷ್ಟ್ರಗಳನ್ನು ನಾವು ಪ್ರೋತ್ಸಾಹಿಸುತ್ತೇವೆ. ಉಕ್ರೇನ್ನಲ್ಲಿನ ಯುದ್ಧದಲ್ಲಿ ತಕ್ಷಣ ಕದನ ವಿರಾಮಕ್ಕೆ ರಶ್ಯ ಒಪ್ಪದಿದ್ದರೆ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವುದಾಗಿ ಅಮೆರಿಕಾದ ಹಣಕಾಸು ಇಲಾಖೆ ಹೇಳಿದೆ.
ರಶ್ಯದ ವಿರುದ್ಧ ನಿರ್ಬಂಧ ಜಾರಿಗೊಳಿಸುವ ಬದಲು ವ್ಯಾಪಾರ ಕ್ರಮಗಳನ್ನು ಇದುವರೆಗೆ ಟ್ರಂಪ್ ಆಯ್ಕೆ ಮಾಡಿಕೊಂಡಿದ್ದು ರಶ್ಯದಿಂದ ಸಬ್ಸಿಡಿ ದರದಲ್ಲಿ ತೈಲ ಖರೀದಿಸುವ ಭಾರತದ ವಿರುದ್ಧ 25% ಹೆಚ್ಚವರಿ ಸುಂಕ ವಿಧಿಸುವ ಮೂಲಕ ಪರೋಕ್ಷವಾಗಿ ರಶ್ಯಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದರು. ಆದರೆ ಉಕ್ರೇನ್ನಲ್ಲಿನ ಯುದ್ಧ ಕೊನೆಗೊಳಿಸಲು ರಶ್ಯಕ್ಕೆ ಆಸಕ್ತಿಯಿಲ್ಲದ ಕಾರಣ ಕಠಿಣ ನಿರ್ಬಂಧ ಕ್ರಮ ಕೈಗೊಳ್ಳಲಾಗಿದೆ. ರಶ್ಯದ ತೈಲ ಕಂಪನಿಗಳ ಮೇಲಿನ ನಿರ್ಬಂಧಗಳು ದೀರ್ಘ ಕಾಲ ಜಾರಿಯಲ್ಲಿ ಇರುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಅಮೆರಿಕಾದ ಮೂಲಗಳು ಹೇಳಿವೆ.
ಅಮೆರಿಕದ ಕ್ರಮದ ಬೆನ್ನಲ್ಲೇ ತೈಲ ಬೆಲೆ ಪ್ರತೀ ಬ್ಯಾರಲ್ಗೆ 2 ಡಾಲರ್ ನಷ್ಟು ಏರಿಕೆಯಾಗಿದೆ.
ರಶ್ಯದ ಎಲ್ಎನ್ಜಿ ಆಮದಿಗೆ ಇಯು ನಿಷೇಧ:
ಇದಕ್ಕೂ ಮುನ್ನ ಯುರೋಪಿಯನ್ ಯೂನಿಯನ್(ಇಯು) ದೇಶಗಳು ಉಕ್ರೇನ್ ವಿರುದ್ಧದ ಯುದ್ಧಕ್ಕಾಗಿ ರಶ್ಯದ ವಿರುದ್ದ ನಿರ್ಬಂಧದ 19ನೇ ಪ್ಯಾಕೇಜಿಗೆ ಅನುಮೋದನೆ ನೀಡಿವೆ. ಇದರಲ್ಲಿ ರಶ್ಯದ ದ್ರವೀಕೃತ ನೈಸರ್ಗಿಕ ಅನಿಲ(ಎಲ್ಎನ್ಜಿ)ಯ ಆಮದು ಮೇಲಿನ ನಿರ್ಬಂಧವೂ ಸೇರಿದೆ. ಎಲ್ಎನ್ಜಿ ನಿಷೇಧ ಎರಡು ಹಂತದಲ್ಲಿ ಜಾರಿಗೆ ಬರಲಿದೆ. ಕಿರು ಅವಧಿಯ ಕರಾರು(ಆಮದು ಗುತ್ತಿಗೆ) 6 ತಿಂಗಳ ಬಳಿಕ ಅಂತ್ಯಗೊಳ್ಳುತ್ತದೆ ಮತ್ತು ದೀರ್ಘಾವಧಿಯ ಗುತ್ತಿಗೆಗಳು 2027ರ ಜನವರಿ 1ರಿಂದ ಜಾರಿಗೆ ಬರುತ್ತವೆ.
ರಶ್ಯದ ರಾಜತಾಂತ್ರಿಕರ ಮೇಲೆ ಪ್ರಯಾಣ ನಿರ್ಬಂಧ, ರಶ್ಯದ ಇನ್ನೂ 117 ಹಡಗುಗಳಿಗೆ ನಿರ್ಬಂಧ, ಕಝಕ್ಸ್ತಾನ್ ಮತ್ತು ಬೆಲಾರುಸ್ನಲ್ಲಿರುವ ರಶ್ಯದ ಬ್ಯಾಂಕ್ಗಳ ಮೇಲೆಯೂ ನಿರ್ಬಂಧ ಕ್ರಮಗಳು ಯುರೋಪಿಯನ್ ಯೂನಿಯನ್ ಘೋಷಿಸಿದ 19ನೇ ನಿರ್ಬಂಧ ಪ್ಯಾಕೇಜ್ನಲ್ಲಿ ಸೇರಿದೆ.
ಭಾರತದ ಮೇಲೆಯೂ ಪರಿಣಾಮದ ಸಾಧ್ಯತೆ:
ಈ ಕ್ರಮಗಳು ಭಾರತದ ತೈಲ ಖರೀದಿ ವ್ಯವಹಾರದ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಈ ವರ್ಷ ಭಾರತದ ಒಟ್ಟು ತೈಲ ಆಮದಿನಲ್ಲಿ ರಶ್ಯದ ತೈಲದ ಪಾಲು 36%ಕ್ಕಿಂತ ಹೆಚ್ಚಿತ್ತು.
ಅಮೆರಿಕಾ ಶತ್ರುದೇಶ: ರಶ್ಯ ಪ್ರತಿಕ್ರಿಯೆ
ರಶ್ಯದ ತೈಲ ಕಂಪನಿಗಳ ಮೇಲೆ ಅಮೆರಿಕಾ ಘೋಷಿಸಿರುವ ನಿರ್ಬಂಧ ಕ್ರಮ ಯುದ್ಧದ ಕ್ರಿಯೆಯಾಗಿದ್ದು ಅಮೆರಿಕಾವೂ ʼಮೂರ್ಖ' ಯುರೋಪಿಯನ್ ಯೂನಿಯನ್ನೊಂದಿಗೆ ಕೈ ಜೋಡಿಸಿದೆ ಎಂದು ರಶ್ಯದ ರಾಷ್ಟ್ರೀಯ ಭದ್ರತಾ ಮಂಡಳಿಯ ಉಪಾಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ ಗುರುವಾರ ಪ್ರತಿಕ್ರಿಯಿಸಿದ್ದಾರೆ.
ಅಮೆರಿಕಾವು ರಶ್ಯದ ಶತ್ರುವಾಗಿದೆ ಮತ್ತು ಅವರ ವಾಚಾಳಿ `ಶಾಂತಿ ಸ್ಥಾಪಕ' (ಟ್ರಂಪ್) ಈಗ ರಶ್ಯಾದೊಂದಿಗೆ ಸಂಪೂರ್ಣವಾಗಿ ಯುದ್ಧದ ಹಾದಿಯಲ್ಲಿದ್ದಾರೆ. ಕೈಗೊಂಡಿರುವ ನಿರ್ಧಾರವು ರಶ್ಯದ ವಿರುದ್ಧದ ಯುದ್ಧದ ಕ್ರಿಯೆಯಾಗಿದೆ' ಎಂದವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಅಮೆರಿಕಾ ಘೋಷಿಸಿರುವ ಕ್ರಮಗಳು ಅತ್ಯಂತ ಪ್ರತಿಕೂಲವಾಗಿದೆ. ರಶ್ಯ ಮತ್ತು ಉಕ್ರೇನ್ ನಡುವಿನ ಯುದ್ಧದ ಮೂಲ ಕಾರಣವನ್ನು ಇತ್ಯರ್ಥಗೊಳಿಸಬೇಕಿದ್ದು ಉಕ್ರೇನ್ನಲ್ಲಿನ ನಮ್ಮ ಗುರಿಗಳಲ್ಲಿ ಬದಲಾಗಿಲ್ಲ. ಪಾಶ್ಚಿಮಾತ್ಯರ ನಿರ್ಬಂಧದಿಂದ ಬಲವಾದ ಪ್ರತಿರಕ್ಷೆಯನ್ನು ನಮ್ಮ ದೇಶ ಬೆಳೆಸಿಕೊಂಡಿದೆ ಮತ್ತು ಅದರ ಇಂಧನ, ಆರ್ಥಿಕ ಸಾಮರ್ಥ್ಯವನ್ನು ಅಭಿವೃದ್ಧಿಗೊಳಿಸುವ ಕಾರ್ಯ ಮುಂದುವರಿಯಲಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರೆ ಮರಿಯಾ ಝಕರೋವಾರನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ. ರಶ್ಯದ ವಿರುದ್ಧ ತಮ್ಮ ನಿರ್ಬಂಧಗಳು ಪರಿಣಾಮ ಬೀರುವುದಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ಯುರೋಪಿಯನ್ ದೇಶಗಳು ಸಿದ್ಧರಿಲ್ಲ ಎಂದು ರಶ್ಯ ಪ್ರತಿಕ್ರಿಯಿಸಿದೆ.
ಉತ್ತಮ ನಿರ್ಧಾರ: ಝೆಲೆನ್ಸ್ಕಿ ಸ್ವಾಗತ
ಕೀವ್: ರಶ್ಯದ ಪ್ರಮುಖ ಎರಡು ತೈಲ ಕಂಪನಿಗಳ ಮೇಲೆ ನಿರ್ಬಂಧ ಜಾರಿಗೊಳಿಸಿರುವುದು ಉತ್ತಮ ನಿರ್ಧಾರವಾಗಿದ್ದು ಇದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಅಭಿನಂದನೆ ಸಲ್ಲಿಸುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಯುದ್ಧವನ್ನು ದೀರ್ಘಾವಧಿಗೆ ವಿಸ್ತರಿಸಿದರೆ ಮತ್ತು ಭಯೋತ್ಪಾದನೆ ಹರಡಿದರೆ ಸೂಕ್ತ ಬೆಲೆ ತೆರಬೇಕಾಗುತ್ತದೆ ಎಂಬ ಸಂದೇಶವನ್ನು ಈ ಕ್ರಮ ರವಾನಿಸಿದೆ. ಆಕ್ರಮಣಕ್ಕೆ ಉತ್ತರ ನೀಡಲಾಗುತ್ತದೆ ಎಂಬ ಬಲಿಷ್ಟ ಮತ್ತು ಅತ್ಯಗತ್ಯದ ಸಂದೇಶ ಇದಾಗಿದೆ' ಎಂದು ಝೆಲೆನ್ಸ್ಕಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಏಕಪಕ್ಷೀಯ ಕ್ರಮ: ಚೀನಾ ವಿರೋಧ
ರಶ್ಯದ ಎರಡು ಪ್ರಮುಖ ತೈಲ ಕಂಪನಿಗಳ ಮೇಲೆ ನಿರ್ಬಂಧ ವಿಧಿಸಿರುವ ಅಮೆರಿಕದ ಕ್ರಮವನ್ನು ಚೀನಾ ಬಲವಾಗಿ ವಿರೋಧಿಸಿದ್ದು ಈ ಕ್ರಮಕ್ಕೆ ಅಂತರಾಷ್ಟ್ರೀಯ ಕಾನೂನಿನಲ್ಲಿ ಯಾವುದೇ ಆಧಾರವಿಲ್ಲ ಎಂದಿದೆ.
ಏಕಪಕ್ಷೀಯ ನಿರ್ಬಂಧವನ್ನು ಚೀನಾ ತಿರಸ್ಕರಿಸುತ್ತದೆ ಮತ್ತು ಬಲವಂತಪಡಿಸುವ ತಂತ್ರದ ಬದಲು ಮಾತುಕತೆಗೆ ಮುಂದಾಗುವಂತೆ ಆಗ್ರಹಿಸುತ್ತದೆ. ಅಲ್ಲದೆ ರಶ್ಯದ ಯುದ್ಧಕ್ಕೆ ಸಹಾಯ ನೀಡುತ್ತಿರುವ ಆರೋಪದಲ್ಲಿ ಚೀನಾದ ಹಲವು ಕಂಪೆನಿಗಳ ವಿರುದ್ಧ ಯುರೋಪಿಯನ್ ಯೂನಿಯನ್ ವಿಧಿಸಿರುವ ನಿರ್ಬಂಧವನ್ನು ನಾವು ವಿರೋಧಿಸುತ್ತೇವೆ. ಉಕ್ರೇನ್ ಬಿಕ್ಕಟ್ಟನ್ನು ಚೀನಾ ನಿರ್ಮಿಸಿಲ್ಲ ಅಥವಾ ಈ ಬಿಕ್ಕಟ್ಟು ನಮಗೆ ಸಂಬಂಧಿಸಿದ್ದಲ್ಲ. ಚೀನಾದ ಸಂಸ್ಥೆಗಳ ಕಾನೂನುಬದ್ಧ ಹಿತಾಸಕ್ತಿಗಳಿಗೆ ಹಾನಿಯಾಗುವ ಯಾವುದೇ ಕ್ರಮವನ್ನು ವಿರೋಧಿಸುತ್ತೇವೆ' ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಗುವೊ ಜಿಯಾಕುನ್ ಗುರುವಾರ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.







