ರಹಸ್ಯವಾಗಿ ನವಾಲ್ನಿಯ ಅಂತ್ಯಸಂಸ್ಕಾರ ನಡೆಸಲು ರಶ್ಯದ ಒತ್ತಡ : ಆರೋಪ

ನವಾಲ್ನಿ | Photo: hindustantimes.com
ಮಾಸ್ಕೋ: ಕಳೆದ ವಾರ ಮೃತಪಟ್ಟಿದ್ದ ರಶ್ಯದ ವಿರೋಧ ಪಕ್ಷದ ಮುಖಂಡ ಅಲೆಕ್ಸಿ ನವಾಲ್ನಿಯ ಅಂತ್ಯಸಂಸ್ಕಾರವನ್ನು ರಹಸ್ಯವಾಗಿ ನಡೆಸುವಂತೆ ರಶ್ಯದ ಅಧಿಕಾರಿಗಳು ಒತ್ತಡ ಹೇರಿದ್ದರು ಎಂದು ನವಾಲ್ನಿಯ ನಿಕಟವರ್ತಿಗಳು ಹೇಳಿದ್ದಾರೆ.
ನವಾಲ್ನಿಯ ಮೃತದೇಹದ ಅಂತ್ಯಸಂಸ್ಕಾರವನ್ನು ಯಾವುದೇ ಶ್ರದ್ಧಾಂಜಲಿ ಕಾರ್ಯಕ್ರಮ, ಅಥವಾ ಅಂತಿಮ ದರ್ಶನಕ್ಕೆ ಅವಕಾಶ ನೀಡದೆ ರಹಸ್ಯವಾಗಿ ನಡೆಸಬೇಕು. ಇಲ್ಲದಿದ್ದರೆ ಅಂತ್ಯಸಂಸ್ಕಾರವನ್ನು ಆಕ್ರ್ಟಿಕ್ ಜೈಲಿನಲ್ಲಿಯೇ ನಡೆಸುತ್ತೇವೆ. ಈ ಬಗ್ಗೆ 3 ಗಂಟೆಯೊಳಗೆ ಅಂತಿಮ ನಿರ್ಧಾರ ತಿಳಿಸಬೇಕು ಎಂದು ನವಾಲ್ನಿಯ ತಾಯಿಗೆ ಒತ್ತಡ ಹೇರಿದ್ದಾರೆ ಎಂದು ನವಾಲ್ನಿಯ ನಿಕಟವರ್ತಿಗಳು ಆರೋಪಿಸಿದ್ದಾರೆ.
ಉತ್ತರ ಸೈಬೀರಿಯಾದ ಆಕ್ರ್ಟಿಕ್ ಜೈಲಿಗೆ ಕಳೆದ ಶನಿವಾರ ಆಗಮಿಸಿದ್ದ ನವಾಲ್ನಿಯ ತಾಯಿ, ಮಗನ ಮೃತದೇಹವನ್ನು ನೀಡುವಂತೆ ಕೋರಿದ್ದರು. ಆದರೆ ಅಧಿಕಾರಿಗಳು ಷರತ್ತು ವಿಧಿಸಿದ್ದರು ಎಂದು ನವಾಲ್ನಿಯ ವಕ್ತಾರ ಕಿರಾ ಯರ್ಮಿಷ್ ಟ್ವೀಟ್(ಎಕ್ಸ್) ಮಾಡಿದ್ದಾರೆ. ರಶ್ಯದ ಹಲವು ಮಾನವ ಹಕ್ಕುಗಳ ಕಾರ್ಯಕರ್ತರು ಹಾಗೂ ಪ್ರಮುಖರು ಯಾವುದೇ ಷರತ್ತು ವಿಧಿಸದೆ ನವಾಲ್ನಿಯ ಮೃತದೇಹವನ್ನು ತಾಯಿಗೆ ಹಸ್ತಾಂತರಿಸುವಂತೆ ಆಗ್ರಹಿಸಿದ್ದಾರೆ. ಈ ಮಧ್ಯೆ, ನವಾಲ್ನಿಯ ಮೃತದೇಹ ಕೊಳೆತುಹೋಗುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿ ನವಾಲ್ನಿಯ ತಾಯಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನವಾಲ್ನಿ ಮೃತಪಟ್ಟಿದ್ದರೂ ಅವರ ಹೆಸರು ಕೇಳಿದರೇ ರಶ್ಯದ ಆಡಳಿತ ವರ್ಗ ಹೆದರುತ್ತಿದೆ' ಎಂದು ನವಾಲ್ನಿಯ ಆಪ್ತರು ಲೇವಡಿ ಮಾಡಿದ್ದಾರೆ.







