ಟರ್ಕಿಯಲ್ಲಿ ರಶ್ಯ ಮತ್ತು ಅಮೆರಿಕ ನಿಯೋಗದ ಸಭೆ

PC : NDTV
ಇಸ್ತಾಂಬುಲ್: ವಾಷಿಂಗ್ಟನ್ ಮತ್ತು ಮಾಸ್ಕೋದಲ್ಲಿನ ಆಯಾ ರಾಯಭಾರ ಕಚೇರಿಗಳ ಬಗ್ಗೆ ವಿವಾದವನ್ನು ಪರಿಹರಿಸುವ ಮಾತುಕತೆಗಾಗಿ ರಶ್ಯ ಮತ್ತು ಅಮೆರಿಕ ರಾಜತಾಂತ್ರಿಕರು ಗುರುವಾರ ಟರ್ಕಿಯಲ್ಲಿ ಸಭೆ ಸೇರಿದ್ದು ಇದು ಸಂಬಂಧಗಳನ್ನು ವ್ಯಾಪಕಗೊಳಿಸುವ ಮತ್ತು ಉಕ್ರೇನ್ನಲ್ಲಿನ ಯುದ್ಧವನ್ನು ಕೊನೆಗೊಳಿಸುವತ್ತ ಕೆಲಸ ಮಾಡುವ ಸಾಮಥ್ರ್ಯದ ಮೊದಲ ಪರೀಕ್ಷೆಯಾಗಿದೆ.
ಜೋ ಬೈಡನ್ ಅವರ ಆಡಳಿತವು ಉಕ್ರೇನ್ಗೆ ಶಸ್ತ್ರಾಸ್ತ್ರ ಮತ್ತು ಆರ್ಥಿಕ ನೆರವು ಒದಗಿಸುವ ಜತೆಗೆ ರಶ್ಯದ ವಿರುದ್ಧ ಸರಣಿ ನಿರ್ಬಂಧ ಜಾರಿಗೊಳಿಸಿದ್ದರಿಂದ ಉಭಯ ದೇಶಗಳ ನಡುವಿನ ಸಂಬಂಧ `ಶೂನ್ಯಕ್ಕಿಂತ ಕೆಳಮಟ್ಟ'ಕ್ಕೆ ಕುಸಿದಿದೆ ಎಂದು ರಶ್ಯ ಕಳೆದ ವರ್ಷ ಹೇಳಿತ್ತು. ಬಳಿಕ ಉಭಯ ದೇಶಗಳೂ `ಮುಯ್ಯಿಗೆ ಮುಯ್ಯಿ' ಎಂಬ ರೀತಿಯಲ್ಲಿ ಪರಸ್ಪರ ರಾಜತಾಂತ್ರಿಕರನ್ನು ಉಚ್ಛಾಟಿಸಿದ ಜತೆಗೆ ರಾಜತಾಂತ್ರಿಕ ಸಿಬ್ಬಂದಿಗಳ ಸಂಖ್ಯೆಯನ್ನು ಸೀಮಿತಗೊಳಿಸಿದ್ದವು. ಆದರೆ ಅವರ ಉತ್ತರಾಧಿಕಾರಿ ಡೊನಾಲ್ಡ್ ಟ್ರಂಪ್ ಅವರು ಈ ನೀತಿಯಿಂದ ದೂರ ಸರಿದು ರಶ್ಯದ ಜತೆ ಮುಕ್ತ ಮಾತುಕತೆಗೆ ಹೆಚ್ಚಿನ ಒಲವು ತೋರಿದ್ದಾರೆ. ಫೆಬ್ರವರಿ 12ರಂದು ಟ್ರಂಪ್ ಮತ್ತು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವೆ ದೂರವಾಣಿ ಕರೆಯ ಬಳಿಕ ಸೌದಿ ಅರೆಬಿಯಾದಲ್ಲಿ ಎರಡೂ ದೇಶಗಳ ನಡುವೆ ಉನ್ನತ ಮಟ್ಟದ ಸಭೆ ನಡೆದಿತ್ತು. ಇದರ ಮುಂದುವರಿದ ಭಾಗವಾಗಿ ಟರ್ಕಿಯಲ್ಲಿ ಮಾತುಕತೆ ನಡೆಯುತ್ತಿದೆ.
ಸಿಬ್ಬಂದಿಗಳ ಮಟ್ಟ, ವೀಸಾ, ರಾಜತಾಂತ್ರಿಕ ಬ್ಯಾಂಕಿಂಗ್(ವಿದೇಶಿ ರಾಜತಾಂತ್ರಿಕ ನಿಯೋಗದವರಿಗೆ ಬ್ಯಾಂಕಿಂಗ್ ಸೇವೆ) ವಿಷಯದ ಬಗ್ಗೆ ಮಾತುಕತೆ ಕೇಂದ್ರೀಕರಿಸುತ್ತದೆ. ರಾಜಕೀಯ ಅಥವಾ ಭದ್ರತೆಯ ವಿಷಯಗಳ ಬಗ್ಗೆ ಮಾತುಕತೆ ನಡೆಯುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇವೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಗುರುವಾರ ಹೇಳಿದೆ. ನಾವು ಎಷ್ಟು ಬೇಗನೆ ಮತ್ತು ಪರಿಣಾಮಕಾರಿಯಾಗಿ ಮುಂದುವರಿಯಬಹುದು ಎಂಬುದನ್ನು ಸಭೆಯ ಫಲಿತಾಂಶ ತೋರಿಸುತ್ತದೆ ಎಂದು ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಹೇಳಿದ್ದಾರೆ.







