ಉಕ್ರೇನಿನ ಒಡೆಸಾ ಬಂದರಿನ ಮೇಲೆ ರಶ್ಯದ ಕ್ಷಿಪಣಿ ದಾಳಿ: 4 ಮಂದಿ ಮೃತ್ಯು(ವಾ)

ಸಾಂದರ್ಭಿಕ ಚಿತ್ರ | PTI
ಕೀವ್: ದಕ್ಷಿಣ ಉಕ್ರೇನಿನ ಬಂದರು ನಗರ ಒಡೆಸಾದ ಮೇಲೆ ಮಂಗಳವಾರ ರಾತ್ರಿ ರಶ್ಯ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಲ್ಲಿ 4 ಮಂದಿ ಮೃತಪಟ್ಟಿದ್ದು ಬಾರ್ಬಡೋಸ್ನ ಧ್ವಜ ಹೊಂದಿದ್ದ ಸರಕು ಹಡಗಿಗೆ ಹಾನಿಯಾಗಿದೆ ಎಂದು ಉಕ್ರೇನ್ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
30 ದಿನಗಳ ಕದನ ವಿರಾಮಕ್ಕೆ ಅಮೆರಿಕ ಮುಂದಿರಿಸಿದ ಪ್ರಸ್ತಾಪವನ್ನು ಉಕ್ರೇನ್ ಅನುಮೋದಿಸಿ, ರಶ್ಯದೊಂದಿಗೆ ತಕ್ಷಣ ಮಾತುಕತೆಗೆ ಸಮ್ಮತಿಸಿದ ಬೆನ್ನಿಗೇ ಈ ದಾಳಿ ನಡೆದಿದೆ. ಅಲ್ಜೀರಿಯಾಕ್ಕೆ ರವಾನಿಸಲು ಸರಕು ಹಡಗಿಗೆ ಧಾನ್ಯಗಳನ್ನು ಲೋಡ್ ಮಾಡುತ್ತಿರುವ ಸಂದರ್ಭದಲ್ಲೇ ರಶ್ಯ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದೆ. ದಾಳಿಯಲ್ಲಿ ಸಿರಿಯಾದ ನಾಲ್ವರು ನಾಗರಿಕರು ಮೃತಪಟ್ಟಿದ್ದು ಉಕ್ರೇನಿನ ಒಬ್ಬ ಮತ್ತು ಸಿರಿಯಾದ ಒಬ್ಬ ಪ್ರಜೆ ಗಾಯಗೊಂಡಿದ್ದಾರೆ. ರಶ್ಯವು ಬಂದರು ಸೇರಿದಂತೆ ಉಕ್ರೇನಿನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಉಕ್ರೇನಿನ ಪುನರ್ನಿರ್ಮಾಣ ಇಲಾಖೆಯ ಸಹಾಯಕ ಸಚಿವ ಒಲೆಕ್ಸಿಯ್ ಕ್ಯುಲೆಬಾ ಹೇಳಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ , ನಿಪ್ರೊಪೆಟ್ರೋವ್ಸ್ಕ್ ಪ್ರಾಂತದ ಕ್ರಿವಿ ರಿಗ್ ನಗರದ ಮೇಲೆ ರಶ್ಯ ನಡೆಸಿದ ಕ್ಷಿಪಣಿ ದಾಳಿಯಲ್ಲಿ 47 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗಿನರೆಗೆ ರಶ್ಯವು ಉಕ್ರೇನ್ ಮೇಲೆ 3 ಕ್ಷಿಪಣಿಗಳು ಹಾಗೂ 133 ಡ್ರೋನ್ ಗಳನ್ನು ಪ್ರಯೋಗಿಸಿದ್ದು ಇದರಲ್ಲಿ 98 ಡ್ರೋನ್ ಗಳನ್ನು ವಾಯು ರಕ್ಷಣಾ ದಳ ಹೊಡೆದುರುಳಿಸಿದೆ ಎಂದು ಉಕ್ರೇನಿನ ವಾಯುಪಡೆ ಹೇಳಿದೆ.