Saudi Arabia | ರಿಯಾದ್ ಬಳಿ ಡ್ರೋನ್ ನಾಶಪಡಿಸಿದ ಸೌದಿ ವಾಯು ರಕ್ಷಣಾ ಪಡೆ

ಸಾಂದರ್ಭಿಕ ಚಿತ್ರ
ರಿಯಾದ್: ಸೌದಿ ಅರೇಬಿಯದ ರಾಜಧಾನಿ ರಿಯಾದ್ ಪ್ರದೇಶದಲ್ಲಿ ಡ್ರೋನ್ ಒಂದನ್ನು ತಡೆಹಿಡಿದು ನಾಶಪಡಿಸಲಾಗಿದೆ ಎಂದು ಯೆಮನ್ ನಲ್ಲಿನ ಸಂಘರ್ಷಕ್ಕೆ ಸಂಬಂಧಿಸಿದ ಸೌದಿ ನೇತೃತ್ವದ ಮೈತ್ರಿಕೂಟ ಶುಕ್ರವಾರ ತಿಳಿಸಿದೆ ಎಂದು Aljazeera ವರದಿ ಮಾಡಿದೆ.
ಮೈತ್ರಿಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್-ಮಾಲಿಕಿ ಅವರು 'ಎಕ್ಸ್' (X) ವೇದಿಕೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ರಿಯಾದ್ ಪ್ರದೇಶದಲ್ಲಿ ಡ್ರೋನ್ ಒಂದನ್ನು ತಡೆದು ನಾಶಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆದರೆ, ಡ್ರೋನ್ ಎಲ್ಲಿಂದ ಉಡಾವಣೆಯಾಗಿತ್ತು, ಯಾರಿಗೆ ಸೇರಿದ್ದು ಎಂಬ ಬಗ್ಗೆ ವಕ್ತಾರರು ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ.
► ನಝ್ರಾನ್ ಕಡೆಗೆ ಎರಡು ಕ್ಷಿಪಣಿ ಉಡಾವಣೆ :
ಶುಕ್ರವಾರ ಸೌದಿ ಅರೇಬಿಯದ ನಝ್ರಾನ್ ಪ್ರಾಂತ್ಯವನ್ನು ಗುರಿಯಾಗಿಸಿ ಯೆಮನ್ ನ ಹೂತಿ ಬಂಡುಕೋರರು ಉಡಾಯಿಸಿದ್ದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸೌದಿ ವಾಯು ರಕ್ಷಣಾ ಪಡೆಗಳು ತಡೆದು ನಾಶಪಡಿಸಿವೆ ಎಂದು ಮೈತ್ರಿಕೂಟ ತಿಳಿಸಿದೆ.
ಕ್ಷಿಪಣಿಗಳನ್ನು ತಡೆದ ಪರಿಣಾಮ ಅವುಗಳ ಅವಶೇಷಗಳು ಬಿದ್ದಿದ್ದು, ಸಂಭವಿಸಿರಬಹುದಾದ ಹಾನಿಯ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೈತ್ರಿಕೂಟದ ವಕ್ತಾರರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಝ್ರಾನ್ ನಲ್ಲಿ ಸೌದಿ ನಾಗರಿಕ ರಕ್ಷಣಾ ಅಧಿಕಾರಿಗಳು ಮುನ್ನೆಚ್ಚರಿಕೆ ಎಚ್ಚರಿಕೆಯನ್ನೂ ನೀಡಿದ್ದರು. ಬಳಿಕ ಅಪಾಯದ ಸೂಚನೆಯನ್ನು ಹಿಂಪಡೆಯಲಾಗಿದೆ.
► ಮಕ್ಕಾ ಪ್ರದೇಶದಲ್ಲೂ ಡ್ರೋನ್ ನಾಶ :
ಇದೇ ದಿನ ಸೌದಿ ಅರೇಬಿಯದ ಮಕ್ಕಾ ಪ್ರದೇಶದಲ್ಲೂ ಮತ್ತೊಂದು ಡ್ರೋನ್ ಅನ್ನು ತಡೆದು ನಾಶಪಡಿಸಲಾಗಿದೆ ಎಂದು ಮೈತ್ರಿಕೂಟ ತಿಳಿಸಿದೆ. ಈ ಘಟನೆಯಿಂದ ಸಂಭವಿಸಿರುವ ಸಾವು-ನೋವು ಅಥವಾ ಆಸ್ತಿ ಹಾನಿಯ ಕುರಿತು ತಕ್ಷಣಕ್ಕೆ ಯಾವುದೇ ಮಾಹಿತಿ ನೀಡಿಲ್ಲ.
ಸೌದಿ ಅರೇಬಿಯದ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿ ಇತ್ತೀಚಿನ ವಾರಗಳಲ್ಲಿ ಹೂತಿ ಬಂಡುಕೋರರು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸುತ್ತಿದ್ದಾರೆ. ಯೆಮನ್ ನಲ್ಲಿನ ಸಂಘರ್ಷದಲ್ಲಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಸರಕಾರಕ್ಕೆ ಸೌದಿ ನೇತೃತ್ವದ ಮೈತ್ರಿಕೂಟ ಬೆಂಬಲ ನೀಡುತ್ತಿದೆ.






