Saudi Arabia | ಮದೀನಾವನ್ನು ಗುರಿಯಾಗಿಸಿಕೊಂಡ ಕ್ಷಿಪಣಿ ತಡೆದ ಸೌದಿ ವಾಯುಪಡೆ
ರಿಯಾದ್ ಮೇಲೆ ಹಲವು ದಿನಗಳಿಂದ ದಾಳಿ; 15 ಮನೆಗಳಿಗೆ ಹಾನಿ, ಐವರಿಗೆ ಗಾಯ

ತುರ್ಕಿ ಅಲ್–ಮಲಿಕಿ | Photo credit : arabnews
ರಿಯಾದ್: ಯೆಮೆನ್ ನ ಹೌತಿ ಬಂಡುಕೋರರ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ಮುಂದುವರಿದಿರುವ ಬೆನ್ನಲ್ಲೇ, ಸೌದಿ ಅರೇಬಿಯಾದ ವಾಯು ರಕ್ಷಣಾ ಪಡೆಗಳು ಗುರುವಾರ ಮದೀನಾ ಪ್ರದೇಶವನ್ನು ಗುರಿಯಾಗಿಸಿಕೊಂಡು ಬಂದ ಕ್ರೂಸ್ ಕ್ಷಿಪಣಿಯನ್ನು ತಡೆಹಿಡಿದಿವೆ.
ಖಾಮಿಸ್ ಮುಷೈತ್ ನಗರ, ಸೌದಿ ಅರೇಬಿಯಾದ ಪೂರ್ವ ಪ್ರದೇಶ ಹಾಗೂ ದಕ್ಷಿಣ ಭಾಗದಲ್ಲಿ ಡ್ರೋನ್ ಗಳನ್ನು ಹೊಡೆದುರುಳಿಸಲಾಗಿದೆ ಎಂದು ಯೆಮೆನ್ ನಲ್ಲಿ ಕಾನೂನುಬದ್ಧತೆಯನ್ನು ಮರುಸ್ಥಾಪಿಸುವ ಒಕ್ಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್–ಮಲಿಕಿ ತಿಳಿಸಿದ್ದಾರೆ.
ಇದೇ ವೇಳೆ, ನಝ್ರಾನ್ ಮತ್ತು ಜಿಝಾನ್ ನಗರಗಳ ನಿವಾಸಿಗಳಿಗೆ ಸೌದಿ ನಾಗರಿಕ ರಕ್ಷಣಾ ಪಡೆಗಳು ಎಚ್ಚರಿಕೆ ಸಂದೇಶಗಳನ್ನು ರವಾನಿಸಿವೆ. ಬಳಿಕ ಅಪಾಯ ನಿವಾರಣೆಯಾಗಿದೆ ಎಂದು ಘೋಷಿಸಿವೆ.
ತಡೆಹಿಡಿಯಲಾದ ಡ್ರೋನ್ ಗಳು ಮತ್ತು ಕ್ಷಿಪಣಿಗಳ ಅವಶೇಷಗಳು ಬಿದ್ದ ಸ್ಥಳಗಳನ್ನು ಚಿತ್ರೀಕರಿಸುವುದು, ದೃಶ್ಯಗಳನ್ನು ಪ್ರಕಟಿಸುವುದು ಅಥವಾ ಹಂಚಿಕೊಳ್ಳುವುದರ ವಿರುದ್ಧ ಆಂತರಿಕ ಸಚಿವಾಲಯ ನೀಡಿರುವ ಸಲಹೆಯನ್ನು ಅಧಿಕಾರಿಗಳು ಪುನರುಚ್ಚರಿಸಿದ್ದಾರೆ.
ಯೆಮೆನ್ ನಿಂದ ಸೌದಿ ಅರೇಬಿಯಾದ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಹಲವು ದಿನಗಳಿಂದ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು ನಡೆಯುತ್ತಿವೆ.
ಬುಧವಾರ ರಿಯಾದ್ ಮೇಲೆ ಹೌತಿಗಳು ಉಡಾಯಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಯ ಅವಶೇಷಗಳು ಬಿದ್ದು ಅರಬ್ ನಿವಾಸಿಯೊಬ್ಬರು ಗಾಯಗೊಂಡಿದ್ದಾರೆ. ಮನೆಯೊಂದಕ್ಕೆ ಹಾಗೂ ವಾಹನಕ್ಕೆ ಅಲ್ಪ ಪ್ರಮಾಣದ ಹಾನಿಯಾಗಿದೆ ಎಂದು ಸೌದಿ ನಾಗರಿಕ ರಕ್ಷಣಾ ಪಡೆ ತಿಳಿಸಿದೆ.
ಮಂಗಳವಾರ ತಡರಾತ್ರಿ ರಿಯಾದ್ ಮೇಲೆ ಉಡಾಯಿಸಲಾದ ಎರಡು ಹೌತಿ ಕ್ರೂಸ್ ಕ್ಷಿಪಣಿಗಳನ್ನು ಸೌದಿ ವಾಯು ರಕ್ಷಣಾ ಪಡೆಗಳು ನಾಶಪಡಿಸಿದ್ದವು. ಅವುಗಳ ಅವಶೇಷಗಳು ಬಿದ್ದು ನಾಲ್ವರು ಗಾಯಗೊಂಡಿದ್ದು, ಸುಮಾರು 15 ವಸತಿ ಮನೆಗಳಿಗೆ ಹಾನಿಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೌತಿಗಳು ದಾಳಿ ನಡೆಸಲು ಸುಧಾರಿತ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದಾರೆ ಎಂದು ಗುರುವಾರ ಒಕ್ಕೂಟ ಆರೋಪಿಸಿದೆ. ತಿಂಗಳ ಆರಂಭದಿಂದ ರಿಯಾದ್ ನ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ 20 ದಾಳಿಗಳು ನಡೆದಿವೆ ಎಂದೂ ತಿಳಿಸಿದೆ.
ಕಳೆದವಾರ ವಿಮಾನ ನಿಲ್ದಾಣದ ಜನನಿಬಿಡ ಟರ್ಮಿನಲ್ವೊಂದರ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ 13 ಮಂದಿ ಸಾವನ್ನಪ್ಪಿದ್ದು, ಯಾತ್ರಿಕರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ಜನರು ಗಾಯಗೊಂಡಿದ್ದರು.






