ಸೌದಿ ಅರೇಬಿಯದಲ್ಲಿ ಬಸ್–ಟ್ಯಾಂಕರ್ ಢಿಕ್ಕಿ; 42 ಭಾರತೀಯ ಉಮ್ರಾ ಯಾತ್ರಿಕರು ಮೃತ್ಯು

PC | maktoobmedia
ರಿಯಾದ್/ಹೈದರಾಬಾದ್: ಮಕ್ಕಾದಿಂದ ಮದೀನಾಗೆ ತೆರಳುತ್ತಿದ್ದ ಉಮ್ರಾ ಯಾತ್ರಿಕರಿದ್ದ ಬಸ್ ಸೌದಿ ಅರೇಬಿಯದ ಮುಫ್ರಿಹತ್ ಬಳಿ ಸೋಮವಾರ ಮುಂಜಾನೆ ಡೀಸೆಲ್ ಟ್ಯಾಂಕರ್ಗೆ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 42 ಮಂದಿ ಭಾರತೀಯ ಯಾತ್ರಿಕರು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಮೃತರಲ್ಲಿ ಹೆಚ್ಚಿನವರು ತೆಲಂಗಾಣದವರು ಎನ್ನಲಾಗಿದೆ.
ಅಪಘಾತದ ತೀವ್ರತೆಗೆ ಬಸ್ ಸಂಪೂರ್ಣ ನಾಶವಾಗಿದ್ದು, ಹಲವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅನೇಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಬೆಳಗ್ಗಿನವರೆಗೂ ಕಾರ್ಯಾಚರಣೆ ಮುಂದುವರಿಸಿದರು. ಮೃತರ ಗುರುತಿನ ಪರಿಶೀಲನೆ ಇನ್ನೂ ನಡೆಯುತ್ತಿದೆ.
ಘಟನೆಯ ಹಿನ್ನೆಲೆಯಲ್ಲಿ ಜಿದ್ದಾದಲ್ಲಿರುವ ಭಾರತೀಯ ಕಾನ್ಸುಲೇಟ್ ತುರ್ತು ನೆರವಿಗಾಗಿ 24x7 ನಿಯಂತ್ರಣ ಕೊಠಡಿಯನ್ನು ಆರಂಭಿಸಿದ್ದು, ಟೋಲ್-ಫ್ರೀ 8002440003 ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ದುರಂತದ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿ, ರಿಯಾದ್ ರಾಯಭಾರ ಕಚೇರಿ ಹಾಗೂ ಜಿದ್ದಾದ ಕಾನ್ಸುಲೇಟ್, ಸಂತ್ರಸ್ತರು ಮತ್ತು ಕುಟುಂಬಗಳಿಗೆ ಅಗತ್ಯ ಸಹಾಯ ಒದಗಿಸುತ್ತಿವೆ ಎಂದು ತಿಳಿಸಿದರು. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ ಅವರು ಗಾಯಾಳುಗಳ ಶೀಘ್ರ ಚೇತರಿಕೆಗೆ ಹಾರೈಸಿದರು.
ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅಪಘಾತದ ಬಗ್ಗೆ ಆಘಾತ ವ್ಯಕ್ತಪಡಿಸಿ, ಸಂತ್ರಸ್ತರ ವಿವರಗಳನ್ನು ತಕ್ಷಣ ಸಂಗ್ರಹಿಸುವಂತೆ ಮುಖ್ಯ ಕಾರ್ಯದರ್ಶಿ ಕೆ. ರಾಮಕೃಷ್ಣ ರಾವ್ ಮತ್ತು ಡಿಜಿಪಿ ಬಿ. ಶಿವಧರ್ ರೆಡ್ಡಿ ಅವರಿಗೆ ಸೂಚಿಸಿದರು. ಸರಕಾರವು ನಿಯಂತ್ರಣ ಕೊಠಡಿ ಸಂಖ್ಯೆ 79979 59754 ಮತ್ತು 99129 19545 ಮೂಲಕ ಸಂಬಂಧಿಕರಿಗೆ ಮಾಹಿತಿ ನೀಡುತ್ತಿದೆ.
ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಈ ದುರಂತಕ್ಕೆ ತೀವ್ರ ದುಃಖ ವ್ಯಕ್ತಪಡಿಸಿ, ನಗರದ ಉಮ್ರಾ ಟೂರ್ ಸಂಸ್ಥೆಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ರಿಯಾದ್ ರಾಯಭಾರ ಕಚೇರಿಗೆ ಹಂಚಿಕೊಂಡಿರುವುದಾಗಿ ANIಗೆ ತಿಳಿಸಿದ್ದಾರೆ.
“ಮೃತದೇಹಗಳನ್ನು ಭಾರತಕ್ಕೆ ತರಲು ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ದೊರಕುವಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ಅವರು ಮನವಿ ಮಾಡಿದ್ದಾರೆ.







