Saudi Arabia | ರಿಯಾದ್ ನಲ್ಲಿ ತೈಲ ಪೈಪ್ಲೈನ್ ನ ಎರಡು ಪಂಪ್ ಕೇಂದ್ರಗಳ ಮೇಲೆ ಡ್ರೋನ್ ದಾಳಿ: ಹೂತಿಗಳ ಪ್ರತಿಪಾದನೆ
►ರಿಯಾದ್ ವಿಮಾನ ನಿಲ್ದಾಣ, ಹಣಕಾಸು ಕೇಂದ್ರದ ಮೇಲೂ ಕ್ಷಿಪಣಿ ದಾಳಿ ►ಮಕ್ಕಾ, ಮದೀನಾ ಪ್ರದೇಶಗಳಲ್ಲಿ ನಾಲ್ಕು ಡ್ರೋನ್ ಗಳನ್ನು ಹೊಡೆದುರುಳಿಸಿದ ಮೈತ್ರಿಕೂಟ

ಸಾಂದರ್ಭಿಕ ಚಿತ್ರ Photo :ap
ರಿಯಾದ್: ಸೌದಿ ಅರೇಬಿಯದ ಪ್ರಮುಖ ತೈಲ ಸಾಗಣೆ ಮಾರ್ಗವಾಗಿರುವ ಪೂರ್ವ-ಪಶ್ಚಿಮ ಪೈಪ್ಲೈನ್ ನ ಎರಡು ಪಂಪ್ ಕೇಂದ್ರಗಳನ್ನು ಡ್ರೋನ್ ಗಳ ಮೂಲಕ ಗುರಿಯಾಗಿಸಿಕೊಂಡಿರುವುದಾಗಿ ಯೆಮನ್ ನ ಹೂತಿಗಳು ಹೇಳಿಕೊಂಡಿದ್ದಾರೆ ಎಂದು Aljazeera ವರದಿ ಮಾಡಿದೆ.
ರಿಯಾದ್ ಪ್ರದೇಶದಲ್ಲಿರುವ ಪೈಪ್ಲೈನ್ ನ 5 ಮತ್ತು 6ನೇ ಸಂಖ್ಯೆಯ ಪಂಪ್ ಕೇಂದ್ರಗಳ ಮೇಲೆ ತಲಾ ಒಂದು ಡ್ರೋನ್ ಹಾರಿಸಲಾಗಿದೆ ಎಂದು ಹೂತಿ ಮಿಲಿಟರಿ ವಕ್ತಾರ ಯಾಹ್ಯಾ ಸಾರಿ ತಿಳಿಸಿದ್ದಾರೆ.
ಇದಕ್ಕೂ ಮೊದಲು, ರವಿವಾರ ರಿಯಾದ್ನ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಅಲ್ಲಿನ ಹಣಕಾಸು ಕೇಂದ್ರವನ್ನು ಗುರಿಯಾಗಿಸಿ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿರುವುದಾಗಿಯೂ ಹೂತಿಗಳು ಹೇಳಿಕೊಂಡಿದ್ದರು.
ಈ ಮಧ್ಯೆ, ರಿಯಾದ್ ಕಡೆಗೆ ಹಾರಿಬಂದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾಗೂ ಸೌದಿಯ ಪೂರ್ವ ಪ್ರಾಂತ್ಯದತ್ತ ಬಂದ ಮೂರು ಡ್ರೋನ್ ಗಳನ್ನು ತಡೆದು ನಾಶಪಡಿಸಿರುವುದಾಗಿ ಸೌದಿ ನೇತೃತ್ವದ ಮೈತ್ರಿಕೂಟದ ಪಡೆಗಳು ತಿಳಿಸಿವೆ.
ಇದಲ್ಲದೆ, ಮಕ್ಕಾ ಪ್ರದೇಶದಲ್ಲಿ ಎರಡು ಮತ್ತು ಮದೀನಾ ಪ್ರದೇಶದಲ್ಲಿ ಎರಡು ಡ್ರೋನ್ ಗಳನ್ನು ತಡೆದು ನಾಶಪಡಿಸಿರುವುದಾಗಿ ಮೈತ್ರಿಕೂಟ ಘೋಷಿಸಿದೆ.
ಆದರೆ, ಮೆಕ್ಕಾ ಮತ್ತು ಮದೀನಾ ಪ್ರದೇಶಗಳಲ್ಲಿ ಡ್ರೋನ್ಗಳನ್ನು ತಡೆದಿರುವುದಾಗಿ ಮೈತ್ರಿಕೂಟ ಮಾಡಿರುವ ಹೇಳಿಕೆಯನ್ನು ಹೂತಿಗಳು ತಳ್ಳಿಹಾಕಿದ್ದಾರೆ. ಈ ಹೇಳಿಕೆ ಸುಳ್ಳು ಮತ್ತು ಕಟ್ಟುಕಥೆ ಎಂದು ಹೂತಿ ಮಿಲಿಟರಿ ವಕ್ತಾರ ಯಾಹ್ಯಾ ಸಾರಿ ಆರೋಪಿಸಿದ್ದಾರೆ.
ಹೂತಿಗಳು ಹೇಳಿಕೊಂಡಿರುವ ತೈಲ ಪಂಪ್ ಕೇಂದ್ರಗಳು, ವಿಮಾನ ನಿಲ್ದಾಣ ಮತ್ತು ಹಣಕಾಸು ಕೇಂದ್ರದ ಮೇಲಿನ ದಾಳಿಗಳ ಕುರಿತು ಸೌದಿ ಅಧಿಕಾರಿಗಳು ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.






