Saudi Arabia | ಮಕ್ಕಾದ ಮಸೀದಿಯಲ್ಲಿ ಅಶ್ಲೀಲ ಕೃತ್ಯ: ಬಾಂಗ್ಲಾದೇಶದ ಇಬ್ಬರಿಗೆ ಮರಣದಂಡನೆ ಜಾರಿ

Photo Credit : Facebook
ದುಬೈ: ಪವಿತ್ರ ನಗರ ಮಕ್ಕಾದ ಮಸೀದಿಯೊಂದರಲ್ಲಿ ಅಶ್ಲೀಲ ಕೃತ್ಯಗಳನ್ನು ಎಸಗಿದ ಆರೋಪದ ಮೇಲೆ ಬಾಂಗ್ಲಾದೇಶದ ಪುರುಷ ಮತ್ತು ಮಹಿಳೆಗೆ ಸೌದಿ ಅರೇಬಿಯದಲ್ಲಿ ವಿಧಿಸಲಾಗಿದ್ದ ಮರಣದಂಡನೆಯನ್ನು ಅಕ್ಟೋಬರ್ 14ರಂದು ಜಾರಿಗೊಳಿಸಲಾಗಿದೆ ಸೌದಿ ಆಂತರಿಕ ಸಚಿವಾಲಯ ಪ್ರಕಟಿಸಿದೆ.
ಸೌದಿ ಪ್ರೆಸ್ ಏಜೆನ್ಸಿ (SPA) ವರದಿ ಪ್ರಕಾರ, ಮರಣದಂಡನೆಗೆ ಒಳಗಾದವರನ್ನು ನಝ್ರುಲ್ ಇಸ್ಲಾಂ ಅಬ್ದುಲ್ ಬಸಿರ್ ಮತ್ತು ಸಿಟಿ ಅಖ್ತರ್ ಎಂದು ಗುರುತಿಸಲಾಗಿದೆ. ಇಬ್ಬರೂ ಬಾಂಗ್ಲಾದೇಶದ ಪ್ರಜೆಗಳು.
ಮಕ್ಕಾದ ಮಸೀದಿಯೊಂದರಲ್ಲಿ ಅನೈತಿಕ ಕೃತ್ಯಗಳನ್ನು ಎಸಗಿದ ಆರೋಪದ ಮೇಲೆ ಭದ್ರತಾ ಅಧಿಕಾರಿಗಳು ಇವರನ್ನು ಬಂಧಿಸಿದ್ದರು. ತನಿಖೆಯ ಬಳಿಕ ಇಬ್ಬರ ವಿರುದ್ಧ ಆರೋಪಗಳನ್ನು ದಾಖಲಿಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು. ತಪ್ಪಿತಸ್ಥರೆಂದು ಸಾಬೀತಾದ ಹಿನ್ನೆಲೆಯಲ್ಲಿ, ಇಸ್ಲಾಮಿಕ್ ಕಾನೂನಿನಡಿ ನ್ಯಾಯಾಧೀಶರ ವಿವೇಚನೆಗೆ ಒಳಪಡುವ 'ತಝೀರ್' ಶಿಕ್ಷೆಯ ಭಾಗವಾಗಿ ಮರಣದಂಡನೆ ವಿಧಿಸಲಾಯಿತು ಎಂದು ಸಚಿವಾಲಯ ತಿಳಿಸಿದೆ.
ಅಪರಾಧದ ಗಂಭೀರತೆ, ಮಸೀದಿಯ ಪಾವಿತ್ರ್ಯತೆಗೆ ಉಂಟಾದ ಧಕ್ಕೆ ಹಾಗೂ ಕೃತ್ಯ ನಡೆದ ಸನ್ನಿವೇಶಗಳನ್ನು ಪರಿಗಣಿಸಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿತ್ತು. ಸಂಬಂಧಪಟ್ಟ ನ್ಯಾಯಾಂಗ ಪ್ರಾಧಿಕಾರವು ತೀರ್ಪನ್ನು ಎತ್ತಿಹಿಡಿದ ಬಳಿಕ ಅದು ಅಂತಿಮಗೊಂಡಿತು. ನಂತರ ಶಿಕ್ಷೆ ಜಾರಿಗೊಳಿಸಲು ರಾಜಮನೆತನದ ಆದೇಶ ಹೊರಡಿಸಲಾಯಿತು.
ಅದರಂತೆ, ಬುಧವಾರ ಮಕ್ಕಾ ಪ್ರದೇಶದಲ್ಲಿ ಇಬ್ಬರಿಗೂ ಮರಣದಂಡನೆ ಜಾರಿಗೊಳಿಸಲಾಯಿತು.
ಮಸೀದಿಗಳ ಪಾವಿತ್ರ್ಯತೆಯನ್ನು ಕಾಪಾಡುವುದು, ಇಸ್ಲಾಮಿಕ್ ಕಾನೂನನ್ನು ಜಾರಿಗೊಳಿಸುವುದು ಹಾಗೂ ನ್ಯಾಯ ಮತ್ತು ಭದ್ರತೆಯನ್ನು ಎತ್ತಿಹಿಡಿಯುವುದು ಸೌದಿ ಸರಕಾರದ ಬದ್ಧತೆಯಾಗಿದೆ ಎಂದು ಆಂತರಿಕ ಸಚಿವಾಲಯ ಪುನರುಚ್ಚರಿಸಿದೆ. ಇದೇ ರೀತಿಯ ಅಪರಾಧಗಳನ್ನು ಎಸಗುವವರು ಸೌದಿ ಅರೇಬಿಯಾದ ಕಾನೂನುಗಳ ಅಡಿಯಲ್ಲಿ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಸಿದೆ.
ಸೌಜನ್ಯ: gulfnews.com






