Saudi Arabia | ಹೌದಿ ದಾಳಿ ಭೀತಿ: ಇತಿಹಾಸದಲ್ಲಿ ಮೊದಲ ಬಾರಿಗೆ ಮಕ್ಕಾದಲ್ಲಿ ವಾಯುದಾಳಿ ಎಚ್ಚರಿಕೆ

ರಿಯಾದ್: ಇರಾನ್ ಬೆಂಬಲಿತ ಹೌದಿ ಬಂಡುಕೋರರು ಸೌದಿ ಅರೇಬಿಯಾ ಮೇಲೆ ದಾಳಿಯನ್ನು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ, ಪವಿತ್ರ ನಗರ ಮಕ್ಕಾದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ವಾಯುದಾಳಿ ಎಚ್ಚರಿಕೆ ನೀಡಲಾಗಿದೆ.
ಸೌದಿ ನಾಗರಿಕ ರಕ್ಷಣಾ ನಿರ್ದೇಶನಾಲಯವು ಮಂಗಳವಾರ ಮಕ್ಕಾ, ಜಿದ್ದಾ ಮತ್ತು ತಾಯಿಫ್ ಸೇರಿದಂತೆ ಪಶ್ಚಿಮ ಸೌದಿ ಅರೇಬಿಯಾದ ಹಲವು ನಗರಗಳಲ್ಲಿ ಎಚ್ಚರಿಕೆ ನೀಡಿತು. ಆದರೆ ಕೆಲವೇ ಸಮಯದ ಬಳಿಕ ಎಚ್ಚರಿಕೆಯನ್ನು ಹಿಂಪಡೆಯಲಾಯಿತು.
‘ಮಕ್ಕಾ ನಗರದಲ್ಲಿನ ಅಪಾಯ ದೂರವಾಗಿದೆ’ ಎಂದು ಸೌದಿ ನಾಗರಿಕ ರಕ್ಷಣಾ ನಿರ್ದೇಶನಾಲಯ ಸಾಮಾಜಿಕ ಜಾಲತಾಣ ‘X’ನಲ್ಲಿ ತಿಳಿಸಿತು. ಸೂಚನೆಗಳನ್ನು ಪಾಲಿಸಬೇಕು, ಗುಂಪುಗೂಡುವುದು ಮತ್ತು ವೀಡಿಯೋ ಚಿತ್ರೀಕರಣ ಮಾಡುವುದನ್ನು ತಪ್ಪಿಸಬೇಕು ಹಾಗೂ ತುರ್ತು ಸಂದರ್ಭದಲ್ಲಿ 911ಕ್ಕೆ ಕರೆ ಮಾಡಬೇಕು ಎಂದು ಸೂಚಿಸಿತು.
ಮಕ್ಕಾದಲ್ಲಿ ಇಂತಹ ಎಚ್ಚರಿಕೆ ನೀಡಿರುವುದು ಇದೇ ಮೊದಲ ಬಾರಿ ಎಂದು ವರದಿಯಾಗಿದೆ. ಸೌದಿ ನಾಗರಿಕ ರಕ್ಷಣಾ ಸಚಿವಾಲಯ ಈ ಹಿಂದೆ ದೇಶದ ಆರು ಪ್ರದೇಶಗಳಲ್ಲಿ ಅಲ್ಪಾವಧಿಯ ವಾಯುದಾಳಿ ಎಚ್ಚರಿಕೆಗಳನ್ನು ನೀಡಿತ್ತು.
ಯೆಮೆನ್ ನಿಂದ ಹೌದಿಗಳು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್ ಗಳ ಮೂಲಕ ಸೌದಿ ಅರೇಬಿಯಾ ಮೇಲೆ ದಾಳಿ ನಡೆಸಿದ್ದು, 13 ಮಂದಿ ಗಾಯಗೊಂಡಿದ್ದರು. ಇದರ ಮರುದಿನವೇ ಮಕ್ಕಾ ಸೇರಿದಂತೆ ಹಲವು ನಗರಗಳಲ್ಲಿ ವಾಯುದಾಳಿ ಎಚ್ಚರಿಕೆ ನೀಡಲಾಗಿದೆ.
ಇಸ್ರೇಲಿ ಪತ್ರಿಕೆ ‘ಹಯೋಮ್’ ವರದಿ ಪ್ರಕಾರ, ಮದೀನಾದ ಪ್ರಿನ್ಸ್ ಮೊಹಮ್ಮದ್ ಬಿನ್ ಅಬ್ದುಲಝೀಝ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (MED) ತೆರಳುತ್ತಿದ್ದ ವಿಮಾನಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿತ್ತು.
ಇದಕ್ಕೂ ಮುನ್ನ ಸೌದಿ ಬೆಂಬಲಿತ ಹಾಗೂ ಅಂತರರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಯೆಮೆನ್ ಸರ್ಕಾರ ಮತ್ತು ಸೌದಿ ಪಡೆಗಳು ಯೆಮೆನ್‌ನ ತೈಝ್ ನಗರದ ಸಮೀಪದ ನೆಲೆಗಳ ಮೇಲೆ ದಾಳಿ ನಡೆಸಿದ್ದವು ಎಂದು ವರದಿ ತಿಳಿಸಿದೆ.
ಈ ವಾರ ಹೌದಿಗಳು ಸೌದಿ ಅರೇಬಿಯಾ ವಿರುದ್ಧ ಕಳೆದ ಕೆಲವು ವರ್ಷಗಳಲ್ಲೇ ಅತ್ಯಂತ ಭಾರಿ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ದಾಳಿಯಲ್ಲಿ ತೈಲ ಘಟಕಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, 73 ಮಂದಿ ಗಾಯಗೊಂಡಿದ್ದಾರೆ.
ಸೋಮವಾರ ಪಶ್ಚಿಮ ಯೆಮೆನ್ ನಲ್ಲಿ ಹೌದಿಗಳು ನಡೆಸಿದ ದಾಳಿಯಲ್ಲಿ ಯೆಮೆನ್ ಸರ್ಕಾರದ ಎಂಟು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಬ್ಬರು ಸೇನಾ ಮೂಲಗಳು ತಿಳಿಸಿದ್ದಾರೆ.
ಅದೇ ವೇಳೆ, ದಕ್ಷಿಣ ಸೌದಿ ಅರೇಬಿಯಾದ ಖಮಿಸ್ ಮುಶೈತ್ ನಲ್ಲಿರುವ ಕಿಂಗ್ ಖಾಲಿದ್ ವಾಯುನೆಲೆಯ ಮೇಲೆ ಡಝನ್ಗಟ್ಟಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್ ಗಳನ್ನು ಬಳಸಿ ಬೃಹತ್ ದಾಳಿ ನಡೆಸಿರುವುದಾಗಿ ಹೌದಿಗಳು ಹೇಳಿಕೊಂಡಿದ್ದಾರೆ.
ಜುಲೈನಲ್ಲಿ ಯೆಮೆನ್ ನ ಅಂತರ್ಯುದ್ಧ ಮತ್ತೆ ತೀವ್ರಗೊಂಡ ಬಳಿಕ ಹೌದಿಗಳು ಸೌದಿ ಬೆಂಬಲಿತ ಸರ್ಕಾರಿ ಪಡೆಗಳೊಂದಿಗೆ ಹೋರಾಟ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ರಿಯಾದ್ ವಿರುದ್ಧ ನೌಕಾ ದಿಗ್ಬಂಧನ ಘೋಷಿಸಿರುವ ಹೌದಿಗಳು, ಕೆಂಪು ಸಮುದ್ರದಲ್ಲಿನ ಸೌದಿ ಹಡಗುಗಳನ್ನು ಗುರಿಯಾಗಿಸಲು ಆರಂಭಿಸಿದ್ದಾರೆ.
ಹೌದಿ ಪೊಲಿಟ್‌ಬ್ಯೂರೋ ಸದಸ್ಯ ಹಜೆಮ್ ಅಲ್-ಅಸ್ಸಾದ್, ‘ಸೌದಿ ಅರೇಬಿಯಾ ನಮ್ಮ ಜನರ ವಿರುದ್ಧದ ಆಕ್ರಮಣವನ್ನು ಮುಂದುವರಿಸುವವರೆಗೆ ಯೆಮೆನ್ ನ ಪ್ರತಿಕ್ರಿಯೆ ಮುಂದುವರಿಯಲಿದೆ ಮತ್ತು ಮತ್ತಷ್ಟು ತೀವ್ರಗೊಳ್ಳಲಿದೆ’ ಎಂದು ಹೇಳಿದ್ದಾರೆ.
ಬಾಬ್ ಅಲ್-ಮಂದಬ್ ಮುಚ್ಚುವ ಎಚ್ಚರಿಕೆ
ಸಂಘರ್ಷ ಮತ್ತಷ್ಟು ಉಲ್ಬಣಗೊಂಡರೆ ಬಾಬ್ ಅಲ್-ಮಂದಬ್ ಜಲಸಂಧಿಯ ಮೂಲಕ ಸಾಗುವ ಹಡಗುಗಳ ಸಂಚಾರಕ್ಕೂ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಬಾಬ್ ಅಲ್-ಮಂದಬ್ ಜಲಸಂಧಿಯನ್ನು ಮುಚ್ಚಿದರೆ ಗಂಭೀರ ಪರಿಣಾಮ ಎದುರಾಗಲಿದೆ ಎಂದು ಖತರ್ ಮಂಗಳವಾರ ಎಚ್ಚರಿಸಿದೆ.
ಜಲಸಂಧಿಯನ್ನು ಮುಚ್ಚುವುದು ‘ಇಡೀ ಜಗತ್ತಿಗೆ ವಿನಾಶಕಾರಿ’ ಎಂದು ಖತರ್ ವಿದೇಶಾಂಗ ಸಚಿವಾಲಯದ ಅಧಿಕಾರಿ ಇಬ್ರಾಹಿಂ ಅಲ್ ಹಶ್ಮಿ ಹೇಳಿದ್ದಾರೆ.
ಹೌದಿಗಳ ವಿರುದ್ಧದ ಯುದ್ಧದಲ್ಲಿ ಅಮೆರಿಕ ಮಧ್ಯಪ್ರವೇಶಿಸಬೇಕು ಎಂದು ಸೌದಿ ಯುವರಾಜರು ಮನವಿ ಮಾಡಿದ್ದರು. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆ ಮನವಿಯನ್ನು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.
ಇದೇ ವೇಳೆ, ಶನಿವಾರ ಹೌದಿಗಳು ವಾಷಿಂಗ್ಟನ್ ಗೆ ಕರೆ ಮಾಡಿ, ಸಂಘರ್ಷದಲ್ಲಿ ಅಮೆರಿಕ ಭಾಗಿಯಾಗದಂತೆ ಮನವಿ ಮಾಡಿದ್ದರು ಎಂದು ಟ್ರಂಪ್ ತಿಳಿಸಿದ್ದಾರೆ.
ಹೌದಿಗಳ ಕ್ಷಿಪ್ರ ಮುನ್ನಡೆ ಇದೀಗ ಕೆಂಪು ಸಮುದ್ರದ ಪ್ರಮುಖ ಸಾಗರ ಮಾರ್ಗಕ್ಕೆ ಬೆದರಿಕೆಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಹೌದಿಗಳ ವಿರುದ್ಧ ಪ್ರತಿಕ್ರಿಯಿಸಲು ಸೌದಿ ಅರೇಬಿಯಾಕ್ಕೆ ಇರುವ ಸೀಮಿತ ಆಯ್ಕೆಗಳನ್ನು ಮರುಪರಿಶೀಲಿಸುವ ಅನಿವಾರ್ಯತೆ ಎದುರಾಗಿದೆ.






