Saudi Arabia | ಲಕ್ನೊ ಮಹಿಳೆ ಸಂಶಯಾಸ್ಪದವಾಗಿ ಮೃತ್ಯು; ವರದಕ್ಷಿಣೆ ಕಿರುಕುಳ ಆರೋಪಿಸಿದ ಕುಟುಂಬ

Photo: ITG
ಲಕ್ನೊ/ಜೆದ್ದಾ (ಸೌದಿ ಅರೇಬಿಯಾ): ಲಕ್ನೊ ಮೂಲದ ಸಾಫ್ಟ್ವೇರ್ ಇಂಜಿನಿಯರ್ ಯುವತಿ ಸೌದಿ ಅರೇಬಿಯಾದ ಜೆದ್ದಾದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಆಕೆಯ ಪತಿ ಹಾಗೂ ಅತ್ತೆಮಾವಂದಿರು ವರದಕ್ಷಿಣೆಗಾಗಿ ಸುದೀರ್ಘ ಕಾಲ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ ಪೂರ್ವನಿಯೋಜಿತವಾಗಿ ಹತ್ಯೆಗೈದಿದ್ದಾರೆ ಎಂದು ಮೃತ ಮಹಿಳೆಯ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಈ ಸಂಬಂಧ ಮೃತ ಮಹಿಳೆಯ ತಂದೆ ಶೇರ್ ಅಲಿ ಖಾನ್ ಲಕ್ನೊದಲ್ಲಿನ ಚಿನ್ಹಾಟ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ತನ್ನ ಅಳಿಯ ಮುಹಮ್ಮದ್ ಆಮೀರ್ ಖಾನ್ ಹಾಗೂ ಆತನ ಕುಟುಂಬದ ಸದಸ್ಯರು ತನ್ನ ಪುತ್ರಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ದೂರಿನ ಪ್ರಕಾರ, ಏಪ್ರಿಲ್ 10, 2025ರಂದು ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಟೆಕ್ ಪದವೀಧರೆ ಹಾಗೂ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಐಮನ್ ಖಾನ್ ಅವರು ಲಕ್ನೊದ ಹೋಟೆಲ್ ಒಂದರಲ್ಲಿ ಮುಹಮ್ಮದ್ ಆಮೀರ್ ಖಾನ್ ಅವರನ್ನು ವಿವಾಹವಾಗಿದ್ದರು. ವಿವಾಹವಾದ ಕೂಡಲೇ ಆಮೀರ್ ಖಾನ್ ಇನೋವಾ ಕಾರಿನ ಬೇಡಿಕೆ ಇಟ್ಟಿದ್ದು, ತನ್ನ ಹೆಸರಿನಲ್ಲಿ ಕಿಯಾ ಸೆಲ್ಟೋಸ್ ಕಾರನ್ನು ನೋಂದಾಯಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿ ಐಮನ್ ಅವರ ಮೊಬೈಲ್ ಫೋನ್ ಒಡೆದು ಹಾಕಿ, ಆಕೆಯನ್ನು ನಿಂದಿಸಿದ್ದಾನೆ ಎಂದೂ ಆರೋಪಿಸಲಾಗಿದೆ.
ವಿವಾಹದ ಬಳಿಕ ಆಮೀರ್ ಖಾನ್ ಸೌದಿ ಅರೇಬಿಯಾಗೆ ತೆರಳಿದ್ದು, ಜೂನ್ 2025ರಲ್ಲಿ ಐಮನ್ ಅವರನ್ನು ಜೆದ್ದಾಗೆ ಕರೆಸಿಕೊಳ್ಳಲಾಗಿದೆ. ಅಲ್ಲಿಗೆ ತೆರಳಿದ ನಂತರ ಐಮನ್ ಅವರಿಗೆ ಪತಿ, ಪತಿಯ ಸಹೋದರ ಹಾಗೂ ಇನ್ನಿಬ್ಬರು ಸಂಬಂಧಿಕರಿಂದ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಇದಲ್ಲದೆ, “ನಿಮ್ಮ ಪೋಷಕರ ಮನೆಯಿಂದ 20 ಲಕ್ಷ ರೂ. ಹಣ ತಂದುಕೊಡಬೇಕು. ಬೇಡಿಕೆಯನ್ನು ಈಡೇರಿಸದಿದ್ದರೆ ನಿನ್ನನ್ನು ಕೊಲೆ ಮಾಡಲಾಗುತ್ತದೆ” ಎಂದು ಐಮನ್ ಅವರಿಗೆ ಬೆದರಿಕೆ ಹಾಕಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಕ್ಟೋಬರ್ 2025ರಲ್ಲಿ ಭಾರತಕ್ಕೆ ಮರಳಿದ್ದ ಐಮನ್ ತಮ್ಮ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ಕುರಿತು ಕುಟುಂಬದವರಿಗೆ ಮಾಹಿತಿ ನೀಡಿದ್ದರು. ನಂತರ ಐಮನ್ ಅವರ ತಂದೆ ಆರೋಪಿಗಳೊಂದಿಗೆ ಮಾತನಾಡಿ ಹಣದ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ ಬಳಿಕ, ಮುಂದಿನ ದಿನಗಳಲ್ಲಿ ಕಿರುಕುಳ ನೀಡುವುದಿಲ್ಲ ಎಂದು ಆರೋಪಿಗಳು ಭರವಸೆ ನೀಡಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಈ ಭರವಸೆಯ ಮೇರೆಗೆ ಅಕ್ಟೋಬರ್ 19, 2025ರಂದು ಐಮನ್ ಜೆದ್ದಾಗೆ ಮರಳಿದ್ದರು. ಆದರೆ ವಾಪಸ್ಸಾದ ತಕ್ಷಣವೇ ಆಕೆಯ ಮೇಲಿನ ಕಿರುಕುಳ ಪುನಾರಂಭಗೊಂಡಿತ್ತು ಎಂದು ಆರೋಪಿಸಲಾಗಿದೆ.
ಕುಟುಂಬದ ಸದಸ್ಯರ ಪ್ರಕಾರ, ಸಂಶಯಾಸ್ಪದವಾಗಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಐಮನ್ ಗರ್ಭಿಣಿಯಾಗಿದ್ದರು. ಆಕೆಯ ಸಾವನ್ನು ಆತ್ಮಹತ್ಯೆಯಂತೆ ಬಿಂಬಿಸಲು ಆರೋಪಿಗಳು ನೇಣು ಬಿಗಿದ ಸ್ಥಿತಿಯನ್ನೇ ಸೃಷ್ಟಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಐಮನ್ ಅವರ ಮೃತದೇಹವನ್ನು ಸೌದಿ ಅರೇಬಿಯಾದಿಂದ ಲಕ್ನೊಗೆ ತರಲಾಗಿದ್ದು, ತಮ್ಮ ಪುತ್ರಿಯ ಮರಣೋತ್ತರ ಪರೀಕ್ಷೆ ನಡೆಸಬೇಕು ಹಾಗೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಂದೆ ಶೇರ್ ಅಲಿ ಖಾನ್ ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಚಿನ್ಹಾಟ್ ಪೊಲೀಸ್ ಠಾಣಾಧಿಕಾರಿ ದಿನೇಶ್ ಮಿಶ್ರಾ, “ಮೃತ ಮಹಿಳೆಯ ತಂದೆ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಎಲ್ಲಾ ಅಂಶಗಳ ಕುರಿತು ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.







