Saudi Arabia | ರಿಯಾದ್ ಮೇಲೆ ಹೌತಿಗಳಿಂದ ಕ್ಷಿಪಣಿ ದಾಳಿ: ನಾಲ್ವರಿಗೆ ಗಾಯ, 15 ವಸತಿ ಕಟ್ಟಡಗಳಿಗೆ ಹಾನಿ

Photo: x.com/adamemedia
ರಿಯಾದ್: ಸೌದಿ ಅರೇಬಿಯದ ರಾಜಧಾನಿ ರಿಯಾದ್ ಅನ್ನು ಗುರಿಯಾಗಿಸಿಕೊಂಡು ಉಡಾಯಿಸಲಾಗಿದ್ದ ಕ್ರೂಸ್ ಕ್ಷಿಪಣಿಗಳನ್ನು ತಡೆಹಿಡಿದ ಬಳಿಕ, ಅವುಗಳ ಅವಶೇಷಗಳು ಬಿದ್ದ ಪರಿಣಾಮ ನಾಲ್ವರು ಗಾಯಗೊಂಡಿದ್ದು, 15 ವಸತಿ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಸೌದಿ ನಾಗರಿಕ ರಕ್ಷಣಾ ಪಡೆ ತಿಳಿಸಿದೆ.
ಯೆಮೆನ್ ನ ಇರಾನ್ ಪರ ಹೌತಿ ಗುಂಪು ಕ್ಷಿಪಣಿಗಳನ್ನು ಉಡಾಯಿಸಿತ್ತು ಎಂದು ನಾಗರಿಕ ರಕ್ಷಣಾ ಪಡೆಯ ವಕ್ತಾರರು ತಿಳಿಸಿದ್ದಾರೆ. ತಡೆಹಿಡಿಯಲಾದ ಎರಡು ಕ್ರೂಸ್ ಕ್ಷಿಪಣಿಗಳ ಅವಶೇಷಗಳು ರಾಜಧಾನಿಯ ಮೇಲೆ ಬಿದ್ದಿವೆ. ಗಾಯಗೊಂಡವರಲ್ಲಿ ಇಬ್ಬರು ಮಹಿಳೆಯರು, ಒಬ್ಬ ಪುರುಷ ಮತ್ತು ಒಂದು ಮಗು ಸೇರಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮೊದಲು, ರಿಯಾದ್ ಅನ್ನು ಗುರಿಯಾಗಿಸಿಕೊಂಡು ಹೌತಿ ಗುಂಪು ಉಡಾಯಿಸಿದ್ದ ಮೂರು ಕ್ರೂಸ್ ಕ್ಷಿಪಣಿಗಳನ್ನು ತಡೆಹಿಡಿದು ನಾಶಪಡಿಸಲಾಗಿದೆ ಎಂದು ಸೌದಿ ನೇತೃತ್ವದ ಮೈತ್ರಿ ಪಡೆಗಳು ತಿಳಿಸಿದ್ದವು. ಅಲ್ಲದೆ, ಸೌದಿ ಅರೇಬಿಯದ ದಕ್ಷಿಣ ಭಾಗದಲ್ಲಿ ಎರಡು ಡ್ರೋನ್ಗಳನ್ನು ವಾಯು ರಕ್ಷಣಾ ವ್ಯವಸ್ಥೆಗಳು ಹೊಡೆದುರುಳಿಸಿದ್ದವು.




