Saudi Arabia | ಹೌತಿ ದಾಳಿ ಭೀತಿ: ರಿಯಾದ್ ನ ಕಿಂಗ್ಡಮ್ ಸೆಂಟರ್ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ
ರಾಜಧಾನಿಯಲ್ಲಿ ಭದ್ರತಾ ಎಚ್ಚರಿಕೆ; ಡ್ರೋನ್ ಗಳು, ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆದ ಸೌದಿ ನೇತೃತ್ವದ ಒಕ್ಕೂಟ

ಸಾಂದರ್ಭಿಕ ಚಿತ್ರ (Photo: Arab News)
ರಿಯಾದ್: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರಗೊಳ್ಳುವ ಆತಂಕದ ನಡುವೆ, ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ನ ಪ್ರಮುಖ ಹೆಗ್ಗುರುತುಗಳಲ್ಲಿ ಒಂದಾದ ಕಿಂಗ್ಡಮ್ ಸೆಂಟರ್ ನ ಕಚೇರಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ.
ಇರಾನ್ ಬೆಂಬಲಿತ ಹೌತಿ ಬಂಡುಕೋರರ ದಾಳಿಗಳ ಭೀತಿ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ರಿಯಾದ್ ನ ಆಕಾಶಮಾರ್ಗದಲ್ಲಿ ಎದ್ದು ಕಾಣುವ 99 ಅಂತಸ್ತಿನ ಕಿಂಗ್ಡಮ್ ಸೆಂಟರ್ ನ ನಿರ್ವಹಣಾ ಮಂಡಳಿಯು ಮುಂದಿನ ಸೂಚನೆ ಬರುವವರೆಗೆ ಉದ್ಯೋಗಿಗಳು ಕಚೇರಿಗೆ ಹಾಜರಾಗದಂತೆ ಆದೇಶಿಸಿದೆ ಎಂದು ಏಜೆನ್ಸ್ ಫ್ರಾನ್ಸ್-ಪ್ರೆಸ್ (AFP) ವರದಿ ಮಾಡಿದೆ.
‘ಕಿಂಗ್ಡಮ್ ಸೆಂಟರ್ ನಲ್ಲಿರುವ ಎಲ್ಲ ಕಚೇರಿ ಉದ್ಯೋಗಿಗಳಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಮತ್ತು ಮುಂದಿನ ಸೂಚನೆ ನೀಡುವವರೆಗೆ ದೂರದಿಂದಲೇ ಕೆಲಸ ಮಾಡುವ ವ್ಯವಸ್ಥೆ ಕಡ್ಡಾಯವಾಗಿದೆ’ ಎಂದು ನಿರ್ವಹಣಾ ಮಂಡಳಿಯು AFPಗೆ ಲಭ್ಯವಾದ ಇಮೇಲ್ ನಲ್ಲಿ ತಿಳಿಸಿದೆ.
ಉದ್ಯೋಗಿಗಳಿಗೆ ಕಚೇರಿಗಳಿಗೆ ಮರಳದಂತೆ ಸೂಚಿಸಲಾಗಿದ್ದರೂ, ಗಗನಚುಂಬಿ ಕಟ್ಟಡದ ತಳಭಾಗದಲ್ಲಿರುವ ಶಾಪಿಂಗ್ ಮಾಲ್ ಸಾರ್ವಜನಿಕರಿಗಾಗಿ ತೆರೆದಿತ್ತು.
ಸೌದಿ ನೇತೃತ್ವದ ಒಕ್ಕೂಟವು ರಿಯಾದ್ ಪ್ರದೇಶದಲ್ಲಿ ಎರಡು ಡ್ರೋನ್ ಗಳನ್ನು, ಪೂರ್ವ ಪ್ರಾಂತ್ಯದಲ್ಲಿ ಮತ್ತೊಂದು ಡ್ರೋನ್ ಅನ್ನು ಹಾಗೂ ದಕ್ಷಿಣ ಸೌದಿ ಅರೇಬಿಯದಲ್ಲಿ ರಾತ್ರಿ ವೇಳೆ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆಹಿಡಿದಿದೆ ಎಂದು ವರದಿಯಾಗಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ಅಧಿಕಾರಿಗಳು ರಾಜಧಾನಿಯಲ್ಲಿ ಭದ್ರತಾ ಎಚ್ಚರಿಕೆ ನೀಡಿದ್ದರು ಎಂದು ಸಾಮಾಜಿಕ ಮಾಧ್ಯಮ Xನಲ್ಲಿಯೂ ಮಾಹಿತಿ ಹಂಚಿಕೊಳ್ಳಲಾಗಿದೆ.
ಕಿಂಗ್ಡಮ್ ಸೆಂಟರ್ ನ ನಿರ್ವಹಣಾ ಮಂಡಳಿಯು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲು ನಿರ್ದಿಷ್ಟ ಕಾರಣವನ್ನು ಬಹಿರಂಗಪಡಿಸಿಲ್ಲ. ಆದರೆ, ಯೆಮೆನ್ ನ ಹೌತಿ ಬಂಡುಕೋರರು ಈ ಹಿಂದೆ ಹಲವು ಬಾರಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿ ಸೌದಿ ರಾಜಧಾನಿಯಲ್ಲಿ ಆತಂಕ ಸೃಷ್ಟಿಸಿದ್ದರು.
ಅಕ್ಟೋಬರ್ 10ರಂದು ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ಮಾರಕ ದಾಳಿಯ ಬಳಿಕವೂ ಸೌದಿ ಅರೇಬಿಯಾದ ಭದ್ರತೆಯ ಕುರಿತು ಕಳವಳಗಳು ವ್ಯಕ್ತವಾಗಿದ್ದವು. ಆ ದಾಳಿಯಲ್ಲಿ 13 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.






