Saudi Arabia | ಹೂತಿಗಳಿಂದ ರಿಯಾದ್ ನಲ್ಲಿ ಕ್ಷಿಪಣಿ ದಾಳಿ ಯತ್ನ; ತಡೆಯುವ ವೇಳೆ ಅವಶೇಷಗಳು ಬಿದ್ದು ಸೌದಿ ಅರಾಮ್ಕೊ ಕಟ್ಟಡಕ್ಕೆ ಹಾನಿ

Photo: Al Jazeera
ರಿಯಾದ್: ಸೌದಿ ಅರೇಬಿಯದ ರಾಜಧಾನಿ ರಿಯಾದ್ ನಲ್ಲಿರುವ ವಿಶ್ವದ ಪ್ರಮುಖ ತೈಲ ಕಂಪೆನಿಗಳಲ್ಲೊಂದಾದ ಸೌದಿ ಅರಾಮ್ಕೊದ ಆಡಳಿತ ಕಟ್ಟಡಕ್ಕೆ ದಾಳಿಯ ಯತ್ನದ ವೇಳೆ ಹಾನಿಯಾಗಿದೆ. ಕ್ಷಿಪಣಿ ದಾಳಿಯನ್ನು ತಡೆದ ಸಂದರ್ಭದಲ್ಲಿ ಬಿದ್ದ ಅವಶೇಷಗಳಿಂದ ಕಟ್ಟಡದ ಕೆಲವು ಭಾಗಗಳು ಹಾನಿಗೊಳಗಾಗಿವೆ. ಘಟನೆಯಲ್ಲಿ ಯಾವುದೇ ಪ್ರಾಣ-ಹಾನಿ ಸಂಭವಿಸಿಲ್ಲ ಎಂದು ಸೌದಿ ಅರೇಬಿಯದ ಇಂಧನ ಸಚಿವಾಲಯ ತಿಳಿಸಿದೆ.
ರವಿವಾರ ನಡೆದ ಘಟನೆಯಲ್ಲಿ ಕಿಂಗ್ ಅಬ್ದುಲ್ಲಾ ಫೈನಾನ್ಶಿಯಲ್ ಜಿಲ್ಲೆಯಲ್ಲಿರುವ ಅರಾಮ್ಕೊ ಟವರ್ ನ ಹಲವು ಮಹಡಿಗಳ ಕಿಟಕಿಗಳು ಒಡೆದುಹೋಗಿವೆ. ಜಿಲ್ಲೆಯ ಅತಿ ಎತ್ತರದ ಕಟ್ಟಡಗಳಲ್ಲೊಂದಾದ ಅರಾಮ್ಕೊ ಟವರ್ ನ ಕಿಟಕಿಗಳು ಸ್ಫೋಟಗೊಂಡಿರುವುದನ್ನು ತಾವು ಕಂಡಿರುವುದಾಗಿ ಪ್ರತ್ಯಕ್ಷದರ್ಶಿಯೊಬ್ಬರು ರಾಯಿಟರ್ಸ್ಗೆ ತಿಳಿಸಿದ್ದಾರೆ.
ಕಟ್ಟಡಕ್ಕೆ ಸೀಮಿತ ಪ್ರಮಾಣದ ಹಾನಿಯಾಗಿದೆ ಎಂದು ಸಚಿವಾಲಯ ಹೇಳಿದೆ. ಯೆಮೆನ್ ನ ಇರಾನ್ ಬೆಂಬಲಿತ ಹೂತಿಗಳು ರಿಯಾದ್ ನತ್ತ ಹಾರಿಸಿದ್ದ ಎರಡು ಕ್ಷಿಪಣಿಗಳನ್ನು ಸೌದಿ ನೇತೃತ್ವದ ಒಕ್ಕೂಟ ತಡೆಹಿಡಿದಿರುವುದಾಗಿ ಘೋಷಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ.
ಘಟನೆ ಕುರಿತು ಸೌದಿ ಅರಾಮ್ಕೊ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೂತಿಗಳ ಕಡೆಯಿಂದಲೂ ಯಾವುದೇ ಹೇಳಿಕೆ ಬಂದಿಲ್ಲ.
ಇದಕ್ಕೂ ಮೊದಲು ರವಿವಾರ ರಿಯಾದ್ ನಲ್ಲಿ ಹಲವು ದೊಡ್ಡ ಸ್ಫೋಟಗಳ ಸದ್ದು ಕೇಳಿಬಂದಿತ್ತು. ಸೌದಿ ನಾಗರಿಕ ರಕ್ಷಣಾ ಇಲಾಖೆಯು ಸಂಭವನೀಯ ಬೆದರಿಕೆಯ ಕುರಿತು ಮುನ್ನೆಚ್ಚರಿಕೆ ನೀಡಿದ ಸ್ವಲ್ಪ ಸಮಯದಲ್ಲೇ ಸ್ಫೋಟಗಳು ಸಂಭವಿಸಿದ್ದವು ಎಂದು ರಾಯಿಟರ್ಸ್ ಗೆ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಬಳಿಕ ಅಪಾಯದ ಪರಿಸ್ಥಿತಿ ದೂರವಾಗಿದೆ ಎಂದು ಅಧಿಕಾರಿಗಳು ಘೋಷಿಸಿದ್ದರು.
ನಂತರ ಸೌದಿ ನೇತೃತ್ವದ ಒಕ್ಕೂಟವು ರಿಯಾದ್ ಮತ್ತು ಸೌದಿ ಅರೇಬಿಯದ ದಕ್ಷಿಣ ಭಾಗದಲ್ಲಿ ಎರಡು ಕ್ರೂಸ್ ಕ್ಷಿಪಣಿಗಳನ್ನು ತಡೆಹಿಡಿದು ನಾಶಪಡಿಸಿರುವುದಾಗಿ ತಿಳಿಸಿತ್ತು.






