ಸೌದಿ ನೇತೃತ್ವದ ಮೈತ್ರಿಕೂಟದ ದಾಳಿ | ರಾಸ್ ಇಸ್ಸಾ ಬಂದರಿಗೆ ಹಾನಿ; 7 ಮಂದಿಗೆ ಗಾಯ

ಸಾಂದರ್ಭಿಕ ಚಿತ್ರ | Photo Credit : aljazeera.com
ಸನಾ, ನ. 2: ಯಮನ್ ನ ಹೊಡೇದಾ ಪ್ರಾಂತದಲ್ಲಿರುವ ರಾಸ್ ಇಸ್ಸಾ ಬಂದರು ಮತ್ತು ಬಾಜಿಲ್ ಜಿಲ್ಲೆಯ ತೈಲ ಸೌಲಭ್ಯದ ಮೇಲೆ ಸೌದಿ ನೇತೃತ್ವದ ಮೈತ್ರಿಕೂಟ ನಡೆಸಿದ ದಾಳಿಯಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಹೂತಿಗಳು ಸೋಮವಾರ ತಿಳಿಸಿದ್ದಾರೆ.
ರಾಸ್ ಇಸ್ಸಾ ಬಂದರಿನ ಮೇಲಿನ ದಾಳಿಯಲ್ಲಿ ನಾಲ್ವರು ನಾಗರಿಕರು ಗಾಯಗೊಂಡಿದ್ದರೆ, ಬಾಜಿಲ್ ಜಿಲ್ಲೆಯ ತೈಲ ಸೌಲಭ್ಯದ ಮೇಲಿನ ದಾಳಿಯಲ್ಲಿ ಮತ್ತೂ ಮೂವರು ಗಾಯಗೊಂಡಿದ್ದಾರೆ ಎಂದು ಹೂತಿ ಆರೋಗ್ಯ ಸಚಿವಾಲಯದ ವಕ್ತಾರ ಅನೀಸ್ ಅಲಸ್ಬಾಹಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ತೈಲ ಸೌಲಭ್ಯಗಳು ಮತ್ತು ಪ್ರಮುಖ ಬಂದರುಗಳ ಮೇಲಿನ ಪುನರಾವರ್ತಿತ ದಾಳಿಗಳು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿವೆ. ನಾಗರಿಕರು ಮತ್ತು ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಯಮನ್ ನಲ್ಲಿ ನಡೆಯುತ್ತಿರುವ ಯುದ್ಧಾಪರಾಧಗಳ ಸರಣಿಗೆ ಇವು ಮತ್ತೊಂದು ಸೇರ್ಪಡೆಯಾಗಿವೆ ಎಂದು ಅವರು ಆರೋಪಿಸಿದ್ದಾರೆ.
ಹೂತಿಗಳ ಅಲ್ ಮಸೀರಾ ಟಿವಿ ರಾಸ್ ಇಸ್ಸಾ ಬಂದರಿನಲ್ಲಿರುವ ಹಡಗುಕಟ್ಟೆ ಮತ್ತು ವಾಣಿಜ್ಯ ಹಡಗಿನ ಮೇಲೆ ಸೌದಿ ಅರೆಬಿಯ ದಾಳಿ ನಡೆಸಿದೆ ಎಂದು ವರದಿ ಮಾಡಿದೆ.
ಹೂತಿಗಳ ನಿಯಂತ್ರಣದಲ್ಲಿರುವ ಹೊಡೇದಾ ಪ್ರಾಂತದ ಬಂದರು ಆಹಾರ ಮತ್ತು ಪರಿಹಾರ ಸಾಮಗ್ರಿಗಳ ಪೂರೈಕೆಗೆ ಪ್ರಮುಖ ಪ್ರವೇಶದ್ವಾರವಾಗಿದೆ. ರಾಸ್ ಇಸ್ಸಾ ಬಂದರು ಹೊಡೇದಾ ನಗರದ ಉತ್ತರ ಭಾಗದಲ್ಲಿದ್ದು, ತೈಲ ಆಮದು ಮತ್ತು ಸಂಗ್ರಹಣೆಗೆ ಬಳಕೆಯಾಗುತ್ತದೆ.
ಇದೇ ಪ್ರಾಂತದ ಹುದೇದಾ ವಿಶ್ವವಿದ್ಯಾಲಯದ ವೈದ್ಯಕೀಯ ವಿಭಾಗದ ಮೇಲೆಯೂ ರವಿವಾರ ದಾಳಿ ನಡೆದಿರುವುದಾಗಿ ಹೂತಿ ಮಾಧ್ಯಮಗಳು ವರದಿ ಮಾಡಿವೆ. ಆ ಪ್ರದೇಶದಲ್ಲಿ ಸ್ಫೋಟದ ಶಬ್ದ ಕೇಳಿಸಿದ್ದಾಗಿ ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಹೂತಿಗಳು ಬಳಸುವ ಪ್ರಮುಖ ಸಂಪನ್ಮೂಲಗಳನ್ನು ನಿಷ್ಕ್ರಿಯಗೊಳಿಸುವ ಉದ್ದೇಶದಿಂದ ನಿಖರ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸೌದಿ ನೇತೃತ್ವದ ಮೈತ್ರಿಕೂಟ ತಿಳಿಸಿದೆ.






