ಹೌದಿಗಳ ವಿರುದ್ಧ ದಾಳಿ ನಡೆಸಲು ಟ್ರಂಪ್ ಗೆ ಸೌದಿ ಯುವರಾಜರಿಂದ ಎರಡು ಬಾರಿ ಮನವಿ; ತಿರಸ್ಕರಿಸಿದ ಅಮೆರಿಕ: ವರದಿ

Photo Credit | AP
ರಿಯಾದ್: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಉಲ್ಬಣಿಸುತ್ತಿರುವ ಬೆನ್ನಲ್ಲೇ, ಯೆಮೆನ್ ನ ಹೌದಿ ಬಂಡುಕೋರರ ವಿರುದ್ಧ ದಾಳಿ ನಡೆಸುವಂತೆ ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಎರಡು ಬಾರಿ ಕರೆ ಮಾಡಿ ಮನವಿ ಮಾಡಿದ್ದರು ಎಂದು ‘ಆಕ್ಸಿಯೋಸ್’ ವರದಿ ತಿಳಿಸಿದೆ.
ಯೆಮೆನ್ ನಲ್ಲಿ ಇರಾನ್ ಬೆಂಬಲಿತ ಹೌದಿ ಗುಂಪಿನೊಂದಿಗಿನ ಸಂಘರ್ಷ ತೀವ್ರಗೊಳ್ಳುತ್ತಿದ್ದ ಸಂದರ್ಭದಲ್ಲಿ ಸೌದಿ ಅರೇಬಿಯಾ ಈ ಮನವಿ ಮಾಡಿತ್ತು. ಕೆಂಪು ಸಮುದ್ರದ ಪ್ರಮುಖ ಜಲಮಾರ್ಗವನ್ನು ಹೌದಿಗಳು ತಡೆಹಿಡಿದಿದ್ದ ಸಂದರ್ಭದಲ್ಲಿ, ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ (MBS) ಅವರು ಟ್ರಂಪ್ ಗೆ ಎರಡು ಬಾರಿ ಕರೆ ಮಾಡಿ ಹೌದಿಗಳ ವಿರುದ್ಧ ದಾಳಿ ನಡೆಸುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ.
ಯೆಮೆನ್ ನಲ್ಲಿ ಸಂಘರ್ಷ ತೀವ್ರಗೊಳ್ಳುತ್ತಿರುವ ಬಗ್ಗೆ ಟ್ರಂಪ್ ಕಳವಳ ವ್ಯಕ್ತಪಡಿಸಿದ್ದರೂ, ಹೌದಿಗಳ ವಿರುದ್ಧ ದಾಳಿ ನಡೆಸುವ ಮನವಿಯನ್ನು ಅವರು ತಿರಸ್ಕರಿಸಿದ್ದರು ಎಂದು ವರದಿ ಹೇಳಿದೆ.
ಸದ್ಯ ಹೌದಿಗಳ ವಿರುದ್ಧ ನೇರವಾಗಿ ಮಧ್ಯಪ್ರವೇಶಿಸುವ ಯಾವುದೇ ಯೋಜನೆ ಟ್ರಂಪ್ ಆಡಳಿತಕ್ಕಿಲ್ಲ ಎಂದು ಅಮೆರಿಕದ ಇಬ್ಬರು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮೂಲಗಳ ಪ್ರಕಾರ, ಅಮೆರಿಕದ ಸೆಂಟ್ರಲ್ ಕಮಾಂಡ್ ನ ಕಮಾಂಡರ್ ಅಡ್ಮಿರಲ್ ಬ್ರಾಡ್ ಕೂಪರ್ ಅವರು ‘ತುರ್ತು ಸಮನ್ವಯ ಸಭೆ’ಗಳಿಗಾಗಿ ರಿಯಾದ್ ಗೆ ಭೇಟಿ ನೀಡಿದ್ದರು.
ಸೌದಿ–ಹೌದಿ ಸಂಘರ್ಷ ತೀವ್ರ
ಹಿರಿಯ ಹೌದಿ ಅಧಿಕಾರಿಯೊಬ್ಬರನ್ನು ಹೊತ್ತೊಯ್ಯುತ್ತಿದ್ದ ಇರಾನ್ ವಿಮಾನವು ಯೆಮೆನ್ ರಾಜಧಾನಿ ಸನಾದಲ್ಲಿ ಇಳಿಯುವುದನ್ನು ರಿಯಾದ್ ತಡೆದ ಬಳಿಕ, ಜುಲೈ 2026ರಲ್ಲಿ ಸೌದಿ ಅರೇಬಿಯಾ ಮತ್ತು ಹೌದಿಗಳ ನಡುವಿನ ಸಂಘರ್ಷ ಮತ್ತೆ ಭುಗಿಲೆದ್ದಿತ್ತು.
ಇದಕ್ಕೆ ಪ್ರತಿಯಾಗಿ ಹೌದಿಗಳು ಕೆಂಪು ಸಮುದ್ರದಲ್ಲಿ ಸೌದಿ ತೈಲ ಟ್ಯಾಂಕರ್ಗಳ ಮೇಲೆ ದಾಳಿ ನಡೆಸಲು ಆರಂಭಿಸಿದರು. ಹಾರ್ಮುಝ್ ಜಲಸಂಧಿಯ ದಿಗ್ಬಂಧನದ ಹಿನ್ನೆಲೆಯಲ್ಲಿ ಈ ದಾಳಿಗಳು ಸೌದಿ ಅರೇಬಿಯಾದ ತೈಲ ರಫ್ತು ಮಾರ್ಗಕ್ಕೆ ಬೆದರಿಕೆಯೊಡ್ಡಿದವು.
ಇದರ ಬಳಿಕ ಸೌದಿ ಅರೇಬಿಯಾವು ಯೆಮೆನ್ ನಲ್ಲಿರುವ ತನ್ನ ಮಿತ್ರಪಕ್ಷಗಳೊಂದಿಗೆ ಸೇರಿ ಹೌದಿಗಳ ವಿರುದ್ಧ ವೈಮಾನಿಕ ದಾಳಿ ಹಾಗೂ ಭೂ ಕಾರ್ಯಾಚರಣೆಗಳ ಮೂಲಕ ಪ್ರತಿಕ್ರಿಯಿಸುತ್ತಿದೆ.
ಹೌದಿಗಳು ಕೂಡ ಸೌದಿ ಅರೇಬಿಯಾದ ಮೇಲೆ ದಾಳಿ ಮುಂದುವರಿಸಿದ್ದು, ಇತ್ತೀಚಿನ ದಾಳಿಗಳಲ್ಲಿ ಪ್ರಮುಖ ತೈಲ ಕಂಪೆನಿ ‘ಅರಾಮ್ಕೊ’ವನ್ನೂ ಗುರಿಯಾಗಿಸಿಕೊಂಡಿವೆ.






