SCO ಶೃಂಗಸಭೆ | ಭಯೋತ್ಪಾದನೆ ಯಾರಿಗೂ ತಂತ್ರಗಾರಿಕೆಯ ಸಾಧನವಾಗಲು ಸಾಧ್ಯವಿಲ್ಲ: ಪ್ರಧಾನಿ ಮೋದಿ
ಶೃಂಗಸಭೆಯ ಜಂಟಿ ಘೋಷಣೆಯಲ್ಲಿ ಇರಾನ್ ಮೇಲಿನ ದಾಳಿಗೆ ಆಕ್ಷೇಪ

ಬಿಶ್ಕೆಕ್: ಭಯೋತ್ಪಾದನೆ ಯಾವುದೇ ದೇಶಕ್ಕೂ ತಂತ್ರಗಾರಿಕೆಯ ಸಾಧನವಾಗಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಿರ್ಗಿಸ್ತಾನ್ ರಾಜಧಾನಿ ಬಿಶ್ಕೆಕ್ ನಲ್ಲಿ ನಡೆಯುತ್ತಿರುವ 26ನೇ ಶಾಂಘೈ ಸಹಕಾರ ಸಂಘಟನೆಯ (SCO) ಶೃಂಗಸಭೆಯಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ವಿರುದ್ಧ ಜಾಗತಿಕವಾಗಿ ಒಗ್ಗಟ್ಟಿನ ಕ್ರಮ ಅಗತ್ಯ ಎಂದು ಒತ್ತಿಹೇಳಿದ್ದಾರೆ.
ಭಯೋತ್ಪಾದನೆ ಇಡೀ ಮಾನವಕುಲಕ್ಕೆ ಗಂಭೀರ ಸವಾಲಾಗಿ ಮುಂದುವರಿದಿದೆ. ಇದರ ವಿರುದ್ಧದ ಹೋರಾಟವನ್ನು ಕೇವಲ ಕ್ರಿಯೆ-ಪ್ರತಿಕ್ರಿಯೆ ವಿಧಾನಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದಾರೆ.
“ಭಯೋತ್ಪಾದನೆಗೆ ಹಣಕಾಸು ನೆರವು, ನೇಮಕಾತಿ, ಮೂಲಭೂತವಾದಕ್ಕೆ ಪ್ರಚೋದನೆ ಹಾಗೂ ಸುರಕ್ಷಿತ ಆಶ್ರಯ ನೀಡುವ ಸಂಪೂರ್ಣ ಜಾಲವನ್ನು ಬುಡಮೇಲು ಮಾಡಬೇಕು. ಈ ಗಂಭೀರ ವಿಚಾರದಲ್ಲಿ ಎಲ್ಲರೂ ಒಂದೇ ಧ್ವನಿಯಲ್ಲಿ ಮಾತನಾಡಬೇಕು. ಇಬ್ಬಗೆಯ ನೀತಿಗೆ ಯಾವುದೇ ಅವಕಾಶವಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು,” ಎಂದು ಮೋದಿ ಹೇಳಿದ್ದಾರೆ.
“ಭಯೋತ್ಪಾದನೆಯನ್ನು ಸರ್ಕಾರದ ನೀತಿಯ ಸಾಧನವಾಗಿ ಬಳಸುವ ರಾಷ್ಟ್ರಗಳಿಗೆ, ಅದು ಯಾರಿಗೂ ತಂತ್ರಗಾರಿಕೆಯ ಸಾಧನವಾಗಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಬೇಕು” ಎಂದು ಅವರು ಹೇಳಿದ್ದಾರೆ.
ಸಿಂಧೂ ಜಲ ಒಪ್ಪಂದದ ಬಗ್ಗೆ ಷರೀಫ್ ಪರೋಕ್ಷ ಪ್ರಸ್ತಾಪ
ಇನ್ನೊಂದೆಡೆ, ಸಭೆಯಲ್ಲಿ ಮಾತನಾಡಿದ ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್, “ಪಾಕಿಸ್ತಾನದ ವಿರುದ್ಧ ಅಫ್ಘಾನ್ ನೆಲವನ್ನು ಬಳಸಿಕೊಳ್ಳಲು ಅವಕಾಶ ನೀಡಬಾರದು” ಎಂದು ಹೇಳಿದ್ದಾರೆ.
ಇದೇ ವೇಳೆ, “ನೀರನ್ನು ರಾಜಕೀಯ ಉದ್ದೇಶಗಳಿಗಾಗಿ ಅಥವಾ ಒತ್ತಡ ಹೇರುವ ಸಾಧನವಾಗಿ ಬಳಸುವುದು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದ ಷರೀಫ್, ಅಂತರರಾಷ್ಟ್ರೀಯ ಒಪ್ಪಂದಗಳನ್ನು ಅವುಗಳ ಆಶಯ ಮತ್ತು ಅಕ್ಷರಶಃ ಸಂಪೂರ್ಣವಾಗಿ ಪಾಲಿಸಬೇಕು ಎಂದು ಆಗ್ರಹಿಸಿದ್ದಾರೆ. ಇದು ಭಾರತ–ಪಾಕಿಸ್ತಾನ ನಡುವಿನ ಸಿಂಧೂ ಜಲ ಒಪ್ಪಂದದ ವಿಚಾರಕ್ಕೆ ನೀಡಿದ ಪರೋಕ್ಷ ಉಲ್ಲೇಖ ಎನ್ನಲಾಗಿದೆ.
ಇರಾನ್ ಮೇಲಿನ ದಾಳಿಗೆ ಆಕ್ಷೇಪ; ಶೃಂಗಸಭೆ ಘೋಷಣೆ
ಇರಾನ್ ಮೇಲಿನ ಅಮೆರಿಕ ಮತ್ತು ಇಸ್ರೇಲ್ ನ ಮಿಲಿಟರಿ ದಾಳಿಯನ್ನು ಭಾರತ, ಪಾಕಿಸ್ತಾನ, ರಷ್ಯಾ ಹಾಗೂ ಚೀನಾ ಸೇರಿದಂತೆ SCO ಸದಸ್ಯ ರಾಷ್ಟ್ರಗಳು ಪರೋಕ್ಷವಾಗಿ ಖಂಡಿಸಿವೆ.
ಶೃಂಗಸಭೆಯ ಬಳಿಕ ಹೊರಡಿಸಲಾದ ಶೃಂಗಸಭೆಯ ಜಂಟಿ ಘೋಷಣೆಯಲ್ಲಿ, ಇರಾನ್ ಮೇಲಿನ ದಾಳಿಗಳು ಅಂತರರಾಷ್ಟ್ರೀಯ ಕಾನೂನು ಹಾಗೂ ವಿಶ್ವಸಂಸ್ಥೆಯ ಚಾರ್ಟರ್ ನ ಉಲ್ಲಂಘನೆಯಾಗಿವೆ ಎಂದು ತೀವ್ರ ಕಳವಳ ವ್ಯಕ್ತಪಡಿಸಲಾಗಿದೆ.
ಇದೇ ವೇಳೆ, ಜಾಗತಿಕ ಆಹಾರ, ಇಂಧನ ಮತ್ತು ಮಾನವೀಯ ಭದ್ರತೆಗೆ ಧಕ್ಕೆ ತರುವ “ಏಕಪಕ್ಷೀಯ ನಿರ್ಬಂಧಗಳನ್ನು” ವಿರೋಧಿಸುವ ಮೂಲಕ ಅಮೆರಿಕದ ನೀತಿಗೆ ಅಸಮಾಧಾನ ವ್ಯಕ್ತಪಡಿಸಲಾಗಿದೆ.






