ಟ್ರಂಪ್ ಹೇಳಿಕೆಯ ಬೆನ್ನಲ್ಲೇ ಸ್ಕಾಟ್ಲೆಂಡ್, ವೇಲ್ಸ್ , ಉತ್ತರ ಐರ್ಲೆಂಡ್ ನ ನಾಯಕರ ಸಭೆ; UK ವಿಭಜನೆಯ ಚರ್ಚೆ ಮುನ್ನೆಲೆಗೆ: ವರದಿ
ಏಕೀಕೃತ ಐರ್ಲೆಂಡ್ ಗೆ ಬೆಂಬಲ ಇದೆ ಎಂದಿದ್ದ ಅಮೆರಿಕ ಅಧ್ಯಕ್ಷ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ಕಾರ್ಡಿಫ್, ವೇಲ್ಸ್: ಉತ್ತರ ಐರ್ಲೆಂಡ್ ಯುನೈಟೆಡ್ ಕಿಂಗ್ಡಮ್ನಿಂದ (UK) ಬೇರ್ಪಟ್ಟು ಐರ್ಲೆಂಡ್ ಗಣರಾಜ್ಯದೊಂದಿಗೆ (Republic of Ireland) ಒಂದಾಗುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲ ವ್ಯಕ್ತಪಡಿಸಿದ ಬೆನ್ನಲ್ಲೇ, ಸ್ಕಾಟ್ಲೆಂಡ್, ವೇಲ್ಸ್ ಹಾಗೂ ಉತ್ತರ ಐರ್ಲೆಂಡ್ ನ ನಾಯಕರು ಕಾರ್ಡಿಫ್ ನಲ್ಲಿ ಸಭೆ ಸೇರಲಿದ್ದಾರೆ.
ಈ ಸಭೆಯು ಯುನೈಟೆಡ್ ಕಿಂಗ್ಡಮ್ ವಿಭಜನೆಯ ಸಾಧ್ಯತೆಯ ಬಗ್ಗೆ ಹೊಸ ಚರ್ಚೆಗೆ ನಾಂದಿ ಹಾಡಬಹುದು ಎಂದು ʼಟೈಮ್ಸ್ ಆಫ್ ಇಂಡಿಯಾʼ ವರದಿ ಮಾಡಿದೆ.
ಮೇ ತಿಂಗಳಲ್ಲಿ ನಡೆದ ಸ್ಥಳೀಯ ಚುನಾವಣೆಗಳಲ್ಲಿ ಲೇಬರ್ ಪಕ್ಷ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ, ಪ್ರತ್ಯೇಕತೆಯನ್ನು ಬೆಂಬಲಿಸುವ ಪಕ್ಷಗಳನ್ನು ಪ್ರತಿನಿಧಿಸುವ ಈ ಮೂರೂ ಪ್ರದೇಶಗಳ ಮುಖ್ಯಮಂತ್ರಿಗಳು ಬ್ರಿಟಿಷ್ ಸರ್ಕಾರದ ವಿರುದ್ಧ ಒತ್ತಡ ಹೇರುವ ಸಾಧ್ಯತೆಯಿದೆ.
ವೇಲ್ಸ್, ಸ್ಕಾಟ್ಲೆಂಡ್ ಮತ್ತು ಉತ್ತರ ಐರ್ಲೆಂಡ್ ನಲ್ಲಿ “ಸಾಂವಿಧಾನಿಕ ಬದಲಾವಣೆಗೆ ಸಿದ್ಧತೆ ನಡೆಸಲು, ಯೋಜನೆ ರೂಪಿಸಲು ಹಾಗೂ ಅಗತ್ಯ ನೆರವು ನೀಡಲು” ಬ್ರಿಟನ್ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಈ ಮಹತ್ವದ ಸಭೆಯ ಕುರಿತು ಸ್ಕಾಟಿಷ್ ನ್ಯಾಷನಲ್ ಪಾರ್ಟಿ (SNP) ನಾಯಕ ಜಾನ್ ಸ್ವಿನ್ನಿ, ವೇಲ್ಸ್ನ ಪ್ಲಾಯ್ಡ್ ಸಿಮ್ರು ಪಕ್ಷದ ನಾಯಕ ರುನ್ ಆಪ್ ಐಯೋರ್ವರ್ತ್, ಐರ್ಲೆಂಡ್ ನ ಸಿನ್ ಫೇನ್ ಅಧ್ಯಕ್ಷೆ ಮೇರಿ ಲೌ ಮೆಕ್ಡೊನಾಲ್ಡ್ ಹಾಗೂ ಉಪಾಧ್ಯಕ್ಷೆ ಮಿಚೆಲ್ ಓ’ನೀಲ್ ಅವರು ರವಿವಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
“ವೇಲ್ಸ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಸಾಂವಿಧಾನಿಕ ಬದಲಾವಣೆಯತ್ತ ಹೆಜ್ಜೆ ಇಡುವ ಉದ್ದೇಶದಿಂದ ಕಾರ್ಡಿಫ್ ನಲ್ಲಿ ಸಭೆ ನಡೆಸಲಾಗುತ್ತಿದೆ” ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯುಕೆ ಪ್ರಧಾನಮಂತ್ರಿಗಳ ಅಸ್ಪಷ್ಟ ಹೇಳಿಕೆ:
ಕಳೆದ ವಾರ ನಡೆದ ಪ್ರಧಾನಮಂತ್ರಿಗಳ ಪ್ರಶ್ನೋತ್ತರ ಅವಧಿಯಲ್ಲಿ , ಸಾರ್ವಜನಿಕ ಅಭಿಪ್ರಾಯದಲ್ಲಿ ಸ್ಪಷ್ಟ ಬದಲಾವಣೆ ಕಂಡುಬಂದರೆ ಸ್ಕಾಟ್ಲೆಂಡ್ ಮತ್ತು ಉತ್ತರ ಐರ್ಲೆಂಡ್ ಎರಡರಲ್ಲೂ ಗಡಿ ಜನಾಭಿಪ್ರಾಯ ಸಂಗ್ರಹಣೆ ನಡೆಸುವ ಸಾಧ್ಯತೆಯನ್ನು ಪರಿಗಣಿಸಲಾಗುವುದು ಎಂದು ಯುಕೆ ಪ್ರಧಾನಮಂತ್ರಿ ಬರ್ನ್ಹ್ಯಾಮ್ ಹೇಳಿದ್ದರು.
ಆದರೆ, ವಾಸ್ತವದಲ್ಲಿ ಇಂತಹ ಶಾಸನಬದ್ಧ ಅವಕಾಶ ಉತ್ತರ ಐರ್ಲೆಂಡ್ಗೆ ಮಾತ್ರ ಇದೆ. ಸ್ಕಾಟ್ಲೆಂಡ್ನಲ್ಲಿ ಗಡಿ ಜನಾಭಿಪ್ರಾಯ ಸಂಗ್ರಹಣೆಗೆ ಯಾವುದೇ ಶಾಸನಬದ್ಧ ಅವಕಾಶವಿಲ್ಲ.
ಬಳಿಕ ಸ್ಕಾಟ್ಲೆಂಡ್ ನಾಯಕ ಜಾನ್ ಸ್ವಿನ್ನಿಗೆ ಪತ್ರ ಬರೆದ ಬರ್ನ್ಹ್ಯಾಮ್, ಸ್ಕಾಟ್ಲೆಂಡ್ನಲ್ಲಿ ಸ್ವಾತಂತ್ರ್ಯ ಅಥವಾ ಜನಾಭಿಪ್ರಾಯ ಸಂಗ್ರಹಣೆಯ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ
“ಬ್ರಿಟನ್ ಒಕ್ಕೂಟದ ಕುರಿತ ಯುಕೆ ಸರ್ಕಾರದ ನಿಲುವಿನ ಮೂಲಭೂತ ಅಂಶಗಳೇ ಬರ್ನ್ಹ್ಯಾಮ್ ಗೆ ತಿಳಿದಿರುವಂತೆ ಕಾಣುತ್ತಿಲ್ಲ” ಎಂದು ಸ್ವಿನ್ನಿ ಅವರ ಆಪ್ತ ಮೂಲಗಳು ತಿಳಿಸಿರುವುದಾಗಿ ʼಸಂಡೇ ಟೆಲಿಗ್ರಾಫ್ʼ ವರದಿ ಮಾಡಿದೆ.
ಈ ಕುರಿತು ರವಿವಾರ ಮಾತನಾಡಿದ ಸ್ವಿನ್ನಿ, “ನಾವು ಇದೀಗ ಸಾಂವಿಧಾನಿಕ ಬದಲಾವಣೆಯ ಅತ್ಯಂತ ನಿರ್ಣಾಯಕ ಘಟ್ಟದಲ್ಲಿದ್ದೇವೆ. ನಮ್ಮ ಹಿತಾಸಕ್ತಿಗಳನ್ನು ಬ್ರಿಟನ್ ಸಂಸತ್ತು ಎಂದಿಗೂ ಈಡೇರಿಸುವುದಿಲ್ಲ. ನಮ್ಮ ಆಯಾ ರಾಷ್ಟ್ರಗಳ ಜನರೇ ತಮ್ಮ ಭವಿಷ್ಯದ ಕುರಿತು ಅರ್ಥಪೂರ್ಣ ನಿರ್ಧಾರ ಕೈಗೊಳ್ಳಬೇಕು ಎಂಬ ಸಮಾನ ನಂಬಿಕೆಯನ್ನು ನಮ್ಮ ಪಕ್ಷಗಳು ಹೊಂದಿವೆ” ಎಂದು ಹೇಳಿದ್ದಾರೆ.






