ಫ್ರಾನ್ಸ್ ಪ್ರಧಾನಿ ಸೆಬಾಸ್ಟಿಯನ್ ಲೆಕೊರ್ನು ರಾಜೀನಾಮೆ

ಸೆಬಾಸ್ಟಿಯನ್ ಲೆಕೊರ್ನು | Photo Credit : PTI
ಪ್ಯಾರಿಸ್, ಅ.6: ಕಳೆದ ತಿಂಗಳು ಫ್ರಾನ್ಸ್ ಪ್ರಧಾನ ಮಂತ್ರಿಯಾಗಿ ನೇಮಕಗೊಂಡಿದ್ದ ಸೆಬಾಸ್ಟಿಯನ್ ಲೆಕೊರ್ನು ರಾಜೀನಾಮೆ ನೀಡಿದ್ದು ಈ ಅನಿರೀಕ್ಷಿತ ಬೆಳವಣಿಗೆಯು ಫ್ರಾನ್ಸ್ನ ರಾಜಕೀಯ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಸೂಚನೆ ನೀಡಿದೆ ಎಂದು ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.
ಇದರೊಂದಿಗೆ ಕಳೆದ ಮೂರು ವರ್ಷಗಳಲ್ಲಿ ಫ್ರಾನ್ಸ್ನಲ್ಲಿ 7 ಪ್ರಧಾನಿಗಳು ರಾಜೀನಾಮೆ ನೀಡಿದಂತಾಗಿದೆ.
ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಅವರ ನಿಕಟವರ್ತಿಯಾಗಿದ್ದ ರಕ್ಷಣಾ ಸಚಿವ ಲೆಕೋರ್ನು ಸೆಪ್ಟೆಂಬರ್ 9ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಹಲವು ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ರವಿವಾರ (ಅಕ್ಟೋಬರ್ 5) ತನ್ನ ಸಚಿವ ಸಂಪುಟವನ್ನು ರಚಿಸಿದ್ದು ಸೋಮವಾರ ಸಚಿವ ಸಂಪುಟದ ಪ್ರಥಮ ಸಭೆ ನಿಗದಿಯಾಗಿತ್ತು. ಆದರೆ ಈ ಹಿಂದಿನ ಸಚಿವ ಸಂಪುಟದಲ್ಲಿದ್ದ ಬಹುತೇಕ ಸಚಿವರನ್ನೇ ಮುಂದುವರಿಸಬೇಕು ಎಂದು ಮ್ಯಾಕ್ರೋನ್ ಸೂಚಿಸಿದ್ದು ಆಡಳಿತ ಪಕ್ಷದೊಳಗೆ ಭಿನ್ನಮತ ಭುಗಿಲೇಳಲು ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಲೆಕೋರ್ನು ರಾಜೀನಾಮೆ ನೀಡಿದ್ದು ಅದನ್ನು ಅಧ್ಯಕ್ಷ ಮ್ಯಾಕ್ರೋನ್ ಅಂಗೀಕರಿಸಿರುವುದಾಗಿ ವರದಿಯಾಗಿದೆ.





