ಪತನಗೊಂಡ ಅಮೆರಿಕ ಜೆಟ್ ನ ಎರಡನೇ ಸಿಬ್ಬಂದಿ ಪತ್ತೆ; ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ

PC | aljazeera
ಟೆಹರಾನ್, ಎ.5: ಇರಾನ್ನಲ್ಲಿ ಪತನಗೊಂಡ ಎಫ್-15ಇ ಯುದ್ಧ ವಿಮಾನದ ಕಾಣೆಯಾದ ಎರಡನೇ ಸಿಬ್ಬಂದಿಯನ್ನು ಪತ್ತೆಹಚ್ಚಲಾಗಿದೆ ಎಂದು ಅಮೆರಿಕದ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ.
ಭಾರಿ ಗುಂಡಿನ ಚಕಮಕಿಯ ಬಳಿಕ ಸಿಬ್ಬಂದಿಯನ್ನು ವಶಕ್ಕೆ ಪಡೆದಿರುವುದು ದೃಢಪಟ್ಟಿದೆ. “ಸಿಬ್ಬಂದಿ ಜೀವಂತವಾಗಿದ್ದಾರೆ. ಆದರೆ ಇನ್ನೂ ಸುರಕ್ಷಿತ ಪ್ರದೇಶಕ್ಕೆ ತಲುಪಿಲ್ಲ,” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಕ್ಷಣಾ ತಂಡವು ಇನ್ನೂ ಅವರನ್ನು ಇರಾನ್ ನಿಂದ ಹೊರತೆಗೆದು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಬೇಕಿದ್ದು, ಕಾರ್ಯಾಚರಣೆ ಅಪಾಯಕರ ಹಂತದಲ್ಲೇ ಇದೆ. ಸಿಬ್ಬಂದಿ ಇನ್ನೂ ಇರಾನ್ ಪ್ರದೇಶವನ್ನೇ ತೊರೆದಿಲ್ಲ ಎಂದು ತಿಳಿದುಬಂದಿದೆ.
ಸಿಬ್ಬಂದಿಯ ಪುರುಷರೇ ಅಥವಾ ಮಹಿಳೆಯೇ ಎಂಬ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ.ಎರಡು ದಿನಗಳ ಹಿಂದೆ ಕೊಹ್ಗಿಲುಯೆ ಕೌಂಟಿಯ ಡೆಹ್ಡಾಶ್ಟ್ ನಗರದಲ್ಲಿ ವಿಮಾನ ಪತನಗೊಂಡಿತ್ತು. ನಂತರ ನಡೆದ ದಾಳಿಗಳಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂಬ ವರದಿಗಳೂ ಬಂದಿವೆ.
ಆರಂಭದಲ್ಲಿ ಇರಾನ್ ಅಧಿಕಾರಿಗಳೂ ಸಿಬ್ಬಂದಿಯನ್ನು ಹುಡುಕಲು ಮುಂದಾಗಿದ್ದರು. ನಾಗರಿಕರು ಸಹ ಹುಡುಕಾಟದಲ್ಲಿ ಭಾಗವಹಿಸುವಂತೆ ಕರೆ ನೀಡಲಾಗಿತ್ತು. ಸಿಬ್ಬಂದಿಯನ್ನು ಪತ್ತೆಹಚ್ಚುವವರಿಗೆ ಬಹುಮಾನ ಘೋಷಿಸಲಾಗಿತ್ತು.







